ಮದಲಗಟ್ಟಿ ಆಸರೆ ಮೂರಾಬಟ್ಟೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಜು. 29
ಕಟ್ಟಿದ ಮನೆಗಳಿಗಿಲ್ಲ ಕಿಟಕಿ, ಬಾಗಿಲು, ಮಳೆ ಬಂದರೆ ಸೋರುತ್ತಿರುವ ಆಸರೆ ಸೂರು. ಅದರ ಸುತ್ತಲೂ ಬೆಳೆದು ನಿಂತ ಜಾಲಿ. ವಿದ್ಯುತ್ ಸಂಪರ್ಕವಿಲ್ಲ, ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆ. ಪೂರ್ಣ ಮನೆಗಳನ್ನು ಕಟ್ಟುವವರೆಗೂ ಮೂಲಗ್ರಾಮ ಬಿಟ್ಟು ಕದಲುವುದಿಲ್ಲವೆಂಬ ಸಂತ್ರಸ್ತರ ಪಟ್ಟು. ಇಂಥ ಜ್ವಲಂತ ಸಮಸ್ಯೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಕ್ಷೇತ್ರದಲ್ಲಿದೆ.
ಹೌದು, ತುಂಗಭದ್ರಾ ನದಿ ತೀರದ ಆಂಜನೇಯಸ್ವಾಮಿ (ಪ್ರಾಣದೇವರು) ಸುಕ್ಷೇತ್ರ ಮದಲಗಟ್ಟಿ ಗ್ರಾಮ 2009ರಲ್ಲಿ ನದಿ ಪ್ರವಾಹಕ್ಕೆ ಸಿಲುಕಿತ್ತು. ಆಗ ಅನೇಕ ಬಡ ಕುಟುಂಬಗಳು ಮನೆ ಕಳೆದುಕೊಂಡು ಬಡವರ ಬದುಕು ಬೀದಿಗೆ ಬಂದು ನಿಂತಿತ್ತು. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಹಿಂದಿನ ಸರ್ಕಾರ ಆಸರೆ ಯೋಜನೆಯನ್ನು ಜಾರಿಗೆ ತಂದು, ನಿವೇಶನಗಳಿಗೆ ಅಗತ್ಯ ಭೂಮಿ ಖರೀದಿ ಮಾಡಿತ್ತು. ಬಳ್ಳಾರಿ ಜಿಲ್ಲೆ ಗಣಿ ಮಾಲೀಕರಿಗೆ ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಕಳಪೆ ಕಾಮಗಾರಿ: 4 ವರ್ಷಗಳಾದರೂ ಆಸರೆ ಮನೆ ನಿರ್ಮಾಣವಾಗಿಲ್ಲ. ಈ ಕುರಿತು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಂತ್ರಸ್ತರ ನೋವುಗಳಿಗೆ ಸ್ಪಂದಿಸಿಲ್ಲ. ಆಸರೆ ಯೋಜನೆಗೆ ಅಡಿಗಲ್ಲು ಹಾಕಿದ್ದೇ ಸಾಧನೆ. ಆದರೆ ಮನೆಗಳ ನಿರ್ಮಾಣ, ಗುಣಮಟ್ಟ ಕುರಿತು ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಗೋಜಿಗೆ ಹೋಗದ ಕಾರಣ ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ಮಾಡಿದ್ದಾರೆಂದು ಸಂತ್ರಸ್ತರು ದೂರುತ್ತಾರೆ.
ಯಾವ ಮನೆ ಕಿಟಕಿಗೂ ಬಾಗಿಲು ಇಲ್ಲ. ಸಿಮೆಂಟ್ ಬಾಗಿಲು ಒಡೆದು ಹೋಗಿದೆ. ಇದ್ದ ಬಾಗಿಲನ್ನೂ ಕಿತ್ತುಕೊಂಡು ಹೋಗ್ಯಾರ, ಇಂಥ ಮುಳ್ಳು ಕೊಂಪ್ಯಾಗ ಇರಬೇಕಾಗಿ ಬಂದೈತ್ರಿ... ನಮ್ ಮನೆ ಬಿದ್ದು 4 ವರ್ಷ, ಇದ್ದ ಗುಡಿಸಲು ಬಿದ್ದು ಹೋಗೈತಿ... ಮನೆಗೆ ನಾವ್ ಹೊಸ ಬಾಗಿಲು ತಂದು ರಿಪೇರಿ ಮಾಡಿಕೊಂಡೇವಿ, ಆದರ ಸರ್ಕಾರ ಇನ್ನು ಮನೆ ಹಂಚಿಕೆ ಕೊಟ್ಟಿಲ್ಲರ್ರಿ ಎನ್ನುತ್ತಾರೆ ಮುದ್ದಬಳ್ಳಿ ಸುಂದರಮ್ಮ.
ನೀರಿನ ಟ್ಯಾಂಕ್ ಕಟ್ಯಾರ ಆದ್ರ ನೀರಿಲ್ಲ...! ಯಾವ ಮನೆಗೂ ವಿದ್ಯುತ್ ಸಂಪರ್ಕವಿಲ್ಲ...! ಇದ್ದಬದ್ದ ಕರೆಂಟಿನ ಸಲಕರಣೆಗಳನ್ನು ಕಿತ್ತುಕೊಂಡು ಹೋಗ್ಯಾರ. ಈ ವರೆಗೂ ಯಾವ ಅಧಿಕಾರಿಗಳು ಬಂದಿಲ್ಲ. ಇದೇ ಸೊರೋ ಮನ್ಯಾಗ ಇದೇವಿ ಅಂತ್ತಾರ ತಿರುಕಪ್ಪ, ಗಂಗಪ್ಪ.
ಹೊಳಿ, ಮಳಿ ಬಂದ್ರು ಇಲ್ಲೇ ಸಾಯ್ತೀವಿ: ಗುಣಮಟ್ಟದ ಮನೆ, ಕರೆಂಟ್, ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಕೊಡುವವರೆಗೂ ಎಷ್ಟೇ ಹೊಳಿ, ಮಳಿ ಬಂದ್ರೂ ಇಲ್ಲೇ ಸಾಯ್ತಿವಿ. ನಮಗ ಅಧಿಕಾರಿಗಳ ಹಿಂದ್ ತಿರುಗಾಕ್ಕ ಆಗಲ್ಲ. ಅವರ ಹತ್ರ ಬೇಡಿ ಬೇಡಿ ಸಾಕಾಗಿ ಹೋಗೈತ್ತಿ, ಯಾರ್ ಬಂದ ಹೇಳಿದ್ರು ಮೂಲಗ್ರಾಮ ಬಿಟ್ಟು ಕದಲುವುದಿಲ್ಲ ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.
ತಿರುಗಿ ನೋಡದ ಸಚಿವರು: ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಅವರು ಅನೇಕ ಸಲ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ಸ್ವಾಮಿಗೆ ದರ್ಶನಕ್ಕೆ ಬಂದಿದ್ದಾರೆ. ಅಲ್ಲೇ ತಿರುಗಿ ನೋಡಿದರೆ ಆಸರೆ ಮನೆಗಳು ಕಾಣುತ್ತವೆ. ಆದರೆ ಸಚಿವರು ಅತ್ತ ತಿರುಗಿ ನೋಡಿಲ್ಲ ಎಂಬ ದೂರು ಸಂತ್ರಸ್ತರದ್ದು.
-ಚಂದ್ರು ಕೊಂಚಿಗೇರಿ