ಸತ್ವಶಾಲಿ ಕವಿಗಳ ಸೃಷ್ಟಿ ವರ್ತಮಾನ ಕಾವ್ಯದ ಪುಣ್ಯ
ಹೊಸಪೇಟೆ: ಶ್ರಮವನ್ನೇ ನಂಬಿ ಬದುಕುತ್ತಿರುವ ಸಣ್ಣ ಪುಟ್ಟ ಸಮುದಾಯಗಳಿಂದ ಸತ್ವಶಾಲಿ ಕವಿಗಳು ಸೃಷ್ಟಿಯಾಗುತ್ತಿರುವುದು ವರ್ತಮಾನ ಕಾವ್ಯದ ಪುಣ್ಯ ಎಂದು ತೆಲುಗು ಕವಿ ಡಾ. ಕೆ. ಶಿವಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಚೆನ್ನಪಟ್ಟಣದ ಪಲ್ಲವ ಪ್ರಕಾಶನ ಹಮ್ಮಿಕೊಂಡಿದ್ದ ಆರಿಫ್ ರಾಜಾ ಅವರ 'ಜಂಗಮ ಫಕೀರನ ಜೋಳಿಗೆ' ಹಾಗೂ 'ಬೆಂಕಿಗೆ ತೊಡಿಸಿದ ಬಟ್ಟೆ' ಕವನ ಸಂಕಲನಗಳ ಬಿಡುಗಡೆ ಸಮಾರಂಭ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ಕಾರ್ಪೋರೇಟ್ ಜಗತ್ತಿನ ಅನುಭವಗಳು ಮೇಲ್ಪದರ ಮತ್ತು ಕೃತಕ ಅನುಭವಗಳಾಗಿವೆ. ಗ್ರಾಮೀಣ ಬದುಕಿನ ಸಂಕಟ ಸಂತೋಷಗಳೆ ನಮ್ಮ ಬಹುಸಂಸ್ಕೃತಿಯ ಬದುಕನ್ನು ಅನಾವರಣ ಮಾಡಲು ಸಾಧ್ಯ ಎಂದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ರಹಮತ್ ತರಿಕೇರಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಲೇಖಕರಾದವರು ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು. ಸಮಾಜಕ್ಕೆ ವಸ್ತುನಿಷ್ಠೆಯಿಂದ ಹೇಳುವ ಮನೋಭಾವ ರೂಢಿಸಿಕೊಂಡಿರಬೇಕು ಎಂದರು. ಮತ್ತೋರ್ವ ಹಿರಿಯ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್ ಮಾತನಾಡಿ, ಕಾವ್ಯದ ಮರುಸೃಷ್ಟಿಯಿಂದ ಯಾವ ಪ್ರಯೋಜನಗಳೂ ಆಗಲಾರವು. ಯುವ ಬರಹಗಾರರನ್ನು ಹಲವು ವಿಮರ್ಶಕರು ದಾರಿ ತಪ್ಪಿಸುತ್ತಿದ್ದಾರೆ. ವಿಮರ್ಶಕರು ಯುವ ಬರಹಗಾರರನ್ನು ಉತ್ತಮ ದಾರಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಹಂಪಿ ಕನ್ನಡ ವಿವಿ ಹಿರಿಯ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಮಾತನಾಡಿದರು. ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸರಾವ್ ಅಧ್ಯಕ್ಷತೆ ವಹಿಸಿದ್ದರು. ಕವಿ ಆರಿಫ್ ರಾಜಾ, ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ, ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಮುನಿ ವಾಸುದೇವರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷ ಪಲ್ಲವ ವೆಂಕಟೇಶ್ ಭಾಗವಹಿಸಿದ್ದರು.
ಅನಂತರ ನಡೆದ ಕವಿಗೋಷ್ಠಿಗೆ ಚಂದ್ರು ತುರ್ವಿಹಾಳ, ಪ್ರಮೋದ್ ತುರ್ವಿಹಾಳ ಮತ್ತು ಬಂಡಾಯ ಲೇಖಕ ಬಿ. ಪೀರ್ಬಾಷಾ ಚಾಲನೆ ನೀಡಿದರು. ಶಿವರಾಜ ಬೆಟ್ಟದೂರು, ಟಿ.ಎಸ್. ಗೊರವರ, ಸ್ವಾಮಿ ಪೊನ್ನಾಚಿ, ಮಲ್ಲಿಕಾರ್ಜುನ ಛಬ್ಬಿ, ರವಿ ಹಂಪಿ, ಸೋಮೇಶ ಉಪ್ಪಾರ್, ವೀರೇಂದ್ರ ರಾವಿಹಾಳ, ಶಿವಲಿಂಗಪ್ಪ ಹಂದಿಹಾಳು, ಬಸವರಾಜ ಹೃತ್ಸಾಕ್ಷಿ, ಮಹಾಂತೇಶ ಬಿರದಾರ, ರಂಜಾನ್ ಸಾಬ್, ಟಿ.ಎಂ. ಉಷಾರಾಣಿ, ಪದ್ಮನಾಭ ಭಟ್, ಷರೀಫ್ ಹಸಮ್ಕಲ್ ಇತರರು ಕವನ ವಾಚಿಸಿದರು. ಸುಷ್ಮಾ ಮಕಾಳಿ ಪ್ರಾರ್ಥಿಸಿದರು. ಡಾ. ನಾಗಣ್ಣ ಕಿಲಾರಿ ಸ್ವಾಗತಿಸಿ, ನಿರೂಪಿಸಿದರು.