ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆಸ್ಪತ್ರೆಗೆ ವೈದ್ಯರು, ಮೂಲ ಸೌಕರ್ಯ ಕೊರತೆ: ಧರಣಿ

Lingaraj Badiger
Updated On : 31 Jul 2013, 10:56 am

ಕೂಡ್ಲಿಗಿ: ತಾಲೂಕಿನ ಹೋಬಳಿ ಕೇಂದ್ರವಾದ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹಾಗೂ ಮೂಲ ಸೌಕರ್ಯಗಳ ಕೊರತೆ ಇದ್ದು, ತಕ್ಷಣ ಕಾಯಂ ವೈದ್ಯಾಧಿಕಾರಿ ನಿಯೋಜನೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಲ್ಲಿನ ಕನ್ನಡಸೇನೆ ಘಟಕ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕನ್ನಡಸೇನೆ ಅಧ್ಯಕ್ಷ ಕೆ. ಕರಿವೀರಪ್ಪ ಮಾತನಾಡಿ, ಹೊಸಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ನಿರಂತರ ವಾಹನಗಳ ಚಾಲನೆಯಿಂದ ಅಪಘಾತಗಳುಂಟಾಗುತ್ತವೆ. ಗ್ರಾಮದಲ್ಲಿ ಟೈಫಾಯಿಡ್ ಹಾಗೂ ಕಾಲರಾ ರೋಗಗಳು ಉಲ್ಬಣಿಸುತ್ತಿದ್ದು, ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರ ಅವಶ್ಯಕತೆಯಿದೆ. ಹೀಗಾಗಿ ತುರ್ತಾಗಿ ಕಾಯಂ ವೈದ್ಯರನ್ನು ನೇಮಿಸಬೇಕು. ಇದಲ್ಲದೇ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳಿಲ್ಲದೇ ಆಸ್ಪತ್ರೆ ರೋಗಗ್ರಸ್ತವಾಗಿದೆ. ಹಾಸಿಗೆ ಹಾಗೂ ಹೊದಿಕೆ, ವಿದ್ಯುತ್ ಪರಿಕರಗಳ ಅಸಮರ್ಪಕವಾಗಿದ್ದು ಸರಿಪಡಿಸಬೇಕೆಂದು ಆಗ್ರಹಿಸಿದರು. ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ಇದೂವರೆಗೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಆಸ್ಪತ್ರೆ ಬಿಕೋ ಎನ್ನುತ್ತಿದೆ. ಹೊಸಹಳ್ಳಿ ಸುತ್ತಮುತ್ತಲ ನೂರಾರು ಹಳ್ಳಿಗಳ ರೈತರು ಇದೇ ಆಸ್ಪತ್ರೆಗೆ ಬಂದರೆ ಇಲ್ಲಿ ಸೂಕ್ತ ವೈದ್ಯರು, ಸೌಲಭ್ಯಗಳು ಇಲ್ಲದಿದ್ದರಿಂದ ದೂರದ ಜಗಳೂರು, ಚಿತ್ರದುರ್ಗದ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಭಾಗದ ಜನತೆಯ ಕೂಗು ಕೇಳದ ಅಧಿಕಾರಿಗಳು, ಜನಪ್ರತಿನಿಧಿಗಳು ಗಾಢನಿದ್ರೆಗೆ ತೆರಳಿದ್ದು, ಈ ಭಾಗದ ಜನತೆಯ ದುರ್ದೈವ ಎಂದು ಖೇದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕನ್ನಡ ಸೇನೆ ಹೊಸಹಳ್ಳಿ ಘಟಕದ ಕಾರ್ಯಾಧ್ಯಕ್ಷ ಎಚ್.ಬಿ. ಶರಣಪ್ಪ, ದಯಾನಂದ ಸಜ್ಜನ್, ಜಿಲ್ಲಾ ಸಂಚಾಲಕ ಯು. ನಾಗೇಶ್, ಶ್ಯಾಂಪ್ರಸಾದ್, ಮಹಿಳಾ ಘಟಕದ ಮಂಗಳಾ, ಶಶಿಕಲಾ, ದುರುಗಮ್ಮ, ಗ್ಯಾರೇಜ್ ಸ್ವಾಮಿ, ಸಫಾರೆ ರಾಜು, ಜಿ. ಪಿತಾಂಬರಿ, ಯು.ಬಿ. ರಮೇಶ, ಶಿವಣ್ಣ, ಡ್ರೈವರ್ ಸ್ವಾಮಿ, ಮುತ್ತು ಸ್ವಾಮಿ, ವಿಜಯ್‌ಕುಮಾರ್, ಹೊಸೂರು ಈಶಪ್ಪ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement