ಜೂಜುಕೋರರಿಗೆ ನಿರಂತರ ದಾಳಿ ಶಾಕ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 30
ಮಟ್ಕಾ, ಇಸ್ಪೀಟ್ ಜೂಜಾಟ ನಡೆಯುವ ಅಡ್ಡೆಗಳ ಮೇಲೆ 19 ದಿನಗಳಲ್ಲಿ 13 ಕಡೆ ದಾಳಿ, ಅಂದಾಜು ರು. 16.04 ಲಕ್ಷ ವಶ, ಸುಮಾರು 91 ಜನರ ಬಂಧನ...
ಇದು ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಮಟ್ಕಾ ಜೂಜಾಟ, ಅಂದರ್ ಬಾಹರ್ ಸೇರಿದಂತೆ ಇಸ್ಪೀಟ್ ಜೂಜಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಎಸ್ಪಿ ಡಾ. ಚೇತನ್ ಸಿಂಗ್ ರಾಥೋಡ್ ಮಾರ್ಗದರ್ಶನದಲ್ಲಿ ನಿರಂತರವಾಗಿ ದಾಳಿ ನಡೆದು ಜೂಜುಕೋರರನ್ನು ಬಂಧಿಸಿದ ಅಂಕಿ ಸಂಖ್ಯೆ ಇದು.
ಗ್ರಾಮೀಣ ಪ್ರದೇಶದ ಜನತೆ, ಅದರಲ್ಲೂ ರೈತರು, ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು ಇಸ್ಪೀಟ್ ಜೂಜಾಟ, ಮಟ್ಕಾ, ಅಂದರ್ ಬಾಹರ್‌ಗೆ ದಾಸರಾಗಿ, ಇಡೀ ದಿನ ಅದರಲ್ಲೇ ಮುಳುಗುತ್ತಾರೆ. ಆ ಮೂಲಕ ತಮ್ಮ ಉಜ್ವಲ ಭವಿಷ್ಯದ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಪೋಷಕರ ಮಾತಿಗೆ ಬೆಲೆ ಕೊಡದೆ, ಇಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇಂತಹ ದಂಧೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ನೂತನ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ದಾಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಇನ್ನು ಹೆಚ್ಚಿನ ದಾಳಿಯ ಅಗತ್ಯ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜತೆಗೆ ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಅದರಲ್ಲೂ ಇಂತಹ ಜೂಜು ಅಡ್ಡೆಗಳ ಮಾಹಿತಿ ಬಲ್ಲ ಪೇದೆಗಳ ವರ್ಗಾವಣೆ ಅಗತ್ಯವಿದೆ ಎಂಬುದು ಜನತೆ ಒತ್ತಾಯ.
ಕೇವಲ ದಾಳಿಯಿಂದ ತಡೆಯಲು ಕಷ್ಟ: ಇಸ್ಪೀಟ್ ಜೂಜಾಟ ಆಡುವುದನ್ನು ಕೇವಲ ದಾಳಿಯಿಂದ ಮಾತ್ರ ಪರಿಣಾಮಕಾರಿಯಾಗಿ ತಡೆಯಲು ಕಷ್ಟವಿಲ್ಲ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಇಸ್ಪೀಟ್ ಜೂಜಾಟ, ಮಟ್ಕಾ ಆಡುತ್ತಿದ್ದಾರೆ ಎಂಬ ಮಾಹಿತಿ ಬಹುತೇಕ ಆಯಾ ಠಾಣೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆಲ ಪೇದೆಗಳಿಗೆ ತಿಳಿದಿರುತ್ತದೆ. ಇಂತಹ ಪೇದೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಈ ಎಲ್ಲ ಜೂಜಾಟಗಳನ್ನು ತಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಸ್ಪಿಯವರು ಯೋಚಿಸುವುದು ಉತ್ತಮ ಎಂಬುದು ಜಿಲ್ಲೆ ಜನತೆ ಆಶಯ.
ಇಲಾಖೆಯಲ್ಲಿ ಆಪರೇಷನ್ ಅಗತ್ಯ: ಜಿಲ್ಲೆಯ ಬಹುತೇಕ ಠಾಣೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೇದೆಗಳು, ಮುಖ್ಯಪೇದೆಗಳು ಇದ್ದಾರೆ. ಇಂತವರನ್ನು ವರ್ಗಾವಣೆ ಮಾಡಿದ್ದೇ ಆದಲ್ಲಿ ಇಂತಹ ದಂಧೆಗಳನ್ನು ತಡೆಗಟ್ಟಲು ಸಾಧ್ಯ ಎಂಬ ಮಾತು ಇದೆ. ಇನ್ನು ಬಹುತೇಕ ಠಾಣೆಗಳಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿ ಇಡೀ ಠಾಣೆಯನ್ನೇ ನಿರ್ವಹಿಸುವ ಮಟ್ಟಿಗೆ ಬೆಳೆದಿರುವ ಕೆಲ ಪೇದೆಗಳು ಇದ್ದಾರೆ ಎಂಬ ಮಾಹಿತಿ ಇಲಾಖೆಯಿಂದಲೇ ಲಭ್ಯವಾಗುತ್ತದೆ. ಇಂತಹ ಪೇದೆಗಳಿಗೆ ಕೇವಲ ಇನ್ನಿತರ ಪೇದೆಗಳು ಮಾತ್ರವಲ್ಲ ಕೆಲವೊಮ್ಮೆ ಠಾಣೆಯ ಹಿರಿಯ ಅಧಿಕಾರಿಗಳು ಹೆದರಿಕೊಳ್ಳುವ ವಾತಾವರಣ ಸೃಷ್ಟಿಯಾದರೂ ಆಶ್ಚರ್ಯವಿಲ್ಲ. ಕಾರಣ ಠಾಣೆ ವ್ಯಾಪ್ತಿಯ ಪ್ರತಿಯೊಂದು ಪ್ರದೇಶ, ಗ್ರಾಮಗಳ ಜನರು ಚಿರಪರಿಚಿತವಾಗಿರುವುದರಿಂದ ಸಹಜವಾಗಿಯೇ ಠಾಣೆಯ ಅಧಿಕಾರಿಗಳಿಗೆ ಅವರ ಮೇಲೆ ಅಧಿಕಾರ ಚಲಾಯಿಸಲು ಕಷ್ಟವಾಗುವ ಸನ್ನಿವೇಶಗಳಿರುತ್ತವೆ. ಆದರೆ ಎಲ್ಲ ಪೇದೆಗಳು ಇದೇ ರೀತಿ ಇರುತ್ತಾರೆ ಎಂದಲ್ಲ. ಕೆಲವರು ಮಾತ್ರ ಇದಕ್ಕೆ ಹೊರತಾಗಿಲ್ಲ ಎನ್ನಬಹುದು.
ಆರೋಪಿಗಳ ಮೇಲೆ ಶಿಸ್ತಿನ ಕ್ರಮ: ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಥೋಡ್ ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಈಗಾಗಲೇ ಪೊಲೀಸ್ ಠಾಣೆಯಲ್ಲಿ ಹೆಚ್ಚು ವರ್ಷಗಳ ಕಾರ್ಯನಿರ್ವಹಿಸುತ್ತಿರುವ ಪೇದೆಗಳು ಸೇರಿದಂತೆ ಸಿಬ್ಬಂದಿ ಮೇಲೆ ಆರೋಪಗಳು ಬರುತ್ತಿದ್ದು, ಅಂತಹವರನ್ನು ವರ್ಗಾವಣೆ ಸೇರಿದಂತೆ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಆರೋಪಗಳನ್ನು ಪರಿಶೀಲಿಸಿ, ಅವರ ಮೇಲೆ ಶಿಸ್ತು ಮತ್ತು ವರ್ಗಾವಣೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಠಾಣೆಯ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ.
ನಿರಂತರ ದಾಳಿ ಅಗತ್ಯ...
ನೂತನ ಎಸ್ಪಿ ಮಾರ್ಗದರ್ಶನದಲ್ಲಿ ಇಸ್ಪೀಟ್, ಜೂಜಾಟ ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವುದು ಸಂತೋಷದ ಸಂಗತಿ. ಹೊಸದಾಗಿ ಬಂದಾಗ ಇರುವ ಉತ್ಸಾಹ ಕೊನೆವರೆಗೂ ಇದ್ದು, ನಿರಂತರವಾಗಿ ಇಂತಹ ದಾಳಿಗಳು ನಡೆದಾಗ, ಮಟ್ಕಾ, ಇಸ್ಪೀಟ್ ಜೂಜಾಟವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ. ಇದರಿಂದಾಗಿ ಎಷ್ಟೋ ಸಂಸಾರಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ.
- ಕಮಲಾ ಮರಿಸ್ವಾಮಿ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯೆ
-ಶಶಿಧರ ಮೇಟಿ