ಪಡಿತರ ವಿತರಣೆ ವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಕುರುಗೋಡು: ಇಲ್ಲಿಗೆ ಸಮೀಪದ ಮುದ್ದಟನೂರು ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರ ವಿತರಣಾ ವ್ಯವಸ್ಥೆಯನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ನ್ಯಾಯಬೆಲೆ ಅಂಗಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮುದ್ದಟನೂರು ಹಾಗೂ ಕ್ಯಾಂಪಿಗೆ ಸೇರಿದ ಎರಡೂ ನ್ಯಾಯಬೆಲೆ ಅಂಗಡಿಯ ಮಾಲೀಕರು ಹಾಡಹಗಲೇ ಪ್ರತಿ 50 ಕೆ.ಜಿ.ಗೆ ರು. 500ಗಳಂತೆ ಹೊರಗಿನವರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ತೂಕದಲ್ಲಿಯೂ ಮೋಸವೆಸಗುತ್ತಿದ್ದಾರೆ. ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅಂಗಡಿ ಪ್ರಾರಂಭದಿಂದಲೂ ನೋಟಿಸ್ ಬೋರ್ಡ್‌ಗಳ ಮೇಲೆ ಆಹಾರ ಧಾನ್ಯದ ಬಗ್ಗೆ ಸಮಗ್ರ ಮಾಹಿತಿ ಲಗತ್ತಿಸಿರುವುದಿಲ್ಲ. ಇದರಿಂದ ಬಿಪಿಎಲ್, ಎಪಿಎಲ್ ಕಾರ್ಡ್‌ದಾರರು ಗೊಂದಲಕ್ಕೊಳಗಾಗುವುದು ಸಾಮಾನ್ಯ ಎಂದು ಗ್ರಾಮಸ್ಥರು ದೂರಿದರು.
ಪ್ರಸ್ತುತ ರು. 1ಗೆ ಪ್ರತಿ ಕೆ.ಜೆ. ಅಕ್ಕಿ ನೀಡುತ್ತಿದ್ದು, ಇನ್ನಷ್ಟು ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಮಾತ್ರವಲ್ಲ ಪ್ರತಿಯೊಬ್ಬರಿಂದ ರು. 2ಗೆ ಕೆ.ಜಿ.ಯಂತೆ ಅಕ್ಕಿ, ಗೋದಿ ಸಾರಾಸಗಟಾಗಿ ವಿತರಿಸಲಾಗುತ್ತಿದೆ. ಸರ್ಕಾರ ಫಲಾನುಭವಿಗಳಿಗೆ 5 ಲೀಟರ್‌ನಂತೆ ಕಡ್ಡಾಯವಾಗಿ ಸೀಮೆಎಣ್ಣೆ ವಿತರಿಸಬೇಕೆಂದಿದ್ದರೂ 2ರಿಂದ 3 ಲೀಟರ್ ಮಾತ್ರ ವಿತರಿಸಿ ಇನ್ನುಳಿದ ಸೀಮೆಎಣ್ಣೆಯನ್ನು ರು. 40ಗೆ ಲೀಟರ್‌ನಂತೆ ಹೊರನಗಿನವರಿಗೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಅಂಗಡಿ ಮಾಲೀಕರ ವಿರುದ್ಧ ಅನೇಕ ಬಾರಿ ದೂರು ನೀಡಿದ್ದರೂ ಆಹಾರ ನಿರೀಕ್ಷಕರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಗ್ರಾಮಸ್ಥರೆಲ್ಲ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾಮೂಹಿಕ ಸಂಘ ಸಂಸ್ಥೆಯ ಮುಖಂಡ ಕೆ. ಶರಣಬಸವ, ಮಾರುತಿ, ಕೆ. ಮಂಜುನಾಥ್, ಕೆ. ಅಯ್ಯನಗೌಡ, ಮೌಲಾಸಾಬ್, ಡಿ. ಬಸವರಾಜ್, ಶಾಸಾಬ್, ಶೇಖಣ್ಣ, ಮಲ್ಲಿಕಾರ್ಜುನ, ಆನಂದ ಸೇರಿದಂತೆ 50ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.