ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬೇಡಿಕೆ ಈಡೇರಿಸಿ: ಅಂಗನವಾಡಿ ಕಾರ್ಯಕರ್ತರ ಆಗ್ರಹ

Lingaraj Badiger
Updated On : 31 Jul 2013, 10:56 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 30
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಸಹಯೋಗದಲ್ಲಿ ಅಂಗನವಾಡಿ ನೌಕರರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಶಿಕ್ಷಣ, ಆರೋಗ್ಯ, ವಸತಿ, ಆಹಾರ, ಸೇರಿದಂತೆ ಸಾಮಾಜಿಕ ಬದುಕಿನ ವಿಭಿನ್ನ ಕ್ಷೇತ್ರಗಳಲ್ಲಿನ ಖಾಸಗೀಕರಣ, ವ್ಯಾಪಾರೀಕರಣ ಇತ್ಯಾದಿಗಳ ಕರಿನೆರಳು ಆವರಿಸಿಕೊಂಡಿರುವುದರಿಂದ ಪ್ರಸ್ತುತ ನೀಡಲಾಗುತ್ತಿರುವ ಗೌರವ ಧನ, ಕೂಲಿ ಕಾರ್ಮಿಕರಿಗೆ ನೀಡುತ್ತಿರುವುದಕ್ಕಿಂತಲೂ ಕಡಿಮೆ ಇದೆ. ಇದನ್ನು ಸರಿಪಡಿಸಲು ಅಥವಾ ಈ ಬಗ್ಗೆ ಪ್ರಾಮಾಣಿಕ ಅಧ್ಯಯನ ಕೈಗೊಳ್ಳಲು ಸರ್ಕಾರಗಳು ಮುಂದಾಗಿಲ್ಲ. ಅಂಗನವಾಡಿ ನೌಕರರಿಗೆ ಕನಿಷ್ಠ ರು. 10 ಸಾವಿರ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಎರಡು ಜತೆ ಸಮವಸ್ತ್ರ ನೀಡಿ: ರಾಜ್ಯ ಸರ್ಕಾರ ಇತರೆ ಸರ್ಕಾರಿ ನೌಕರರಿಗೆ ನೀಡುವಂತೆ ಪ್ರತಿ ತಿಂಗಳು ವೇತನ ಪಾವತಿಸಬೇಕು. ಸರ್ಕಾರ ಮೊಟ್ಟೆಯ ಹಣವನ್ನು ಮುಂಗಡವಾಗಿ ನೀಡಬೇಕು. ಇಲ್ಲವಾದಲ್ಲಿ ಆಯಾ ಕೇಂದ್ರಗಳಿಗೆ ಮೊಟ್ಟೆ ಪೂರೈಸಬೇಕು. ನಗರ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಸಾವಿರ ಚದರಡಿ ಇರುವ ಸ್ವಂತ ಕಟ್ಟಡ ನಿರ್ಮಿಸಲು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಕ್ರಮ ಕೈಗೊಳ್ಳಬೇಕು. ವಿಚಾರಣೆಯಿಲ್ಲದೆ ವಜಾಗೊಳಿಸಿದ ಕಾರ್ಯಕರ್ತೆಯರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು. ತಮಿಳುನಾಡು ರಾಜ್ಯದಲ್ಲಿರುವಂತೆ ಅಂಗನವಾಡಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರ ನೀಡಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಪ್ರತಿ ತಿಂಗಳು ಸಂಬಳದೊಂದಿಗೆ ನೀಡಬೇಕು. ಮೇಲ್ವಿಚಾರಕಿ ಸುಶೀಲಾ (ಬಳ್ಳಾರಿ ನಗರ) ಅವರನ್ನು ನಗರ ಯೋಜನೆಯಿಂದ ಹೊರಗೆ ವರ್ಗಾಯಿಸಬೇಕು ಹಾಗೂ ಇವರ ಮೇಲೆ ಇರುವ ಆರೋಪಗಳ ಕುರಿತು ವಿಚಾರಣೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ಅನಂತರ ಜಿಲ್ಲಾ ಪಂಚಾಯಿತಿ ಸಿಇಓ ಅವರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎ. ಆದಿಮೂರ್ತಿ, ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್, ಅಂಗನವಾಡಿ ಕಾರ್ಯರ್ತರ ಸಂಘಟನೆ ಮುಖಂಡರಾದ ಅರ್ಕಾಣಿ, ಯಲ್ಲಮ್ಮ ಗೌಡರ್, ಎಸ್. ರತ್ನಮ್ಮ, ಈ. ಮಂಗಮ್ಮ, ಪಿ. ಪದ್ಮಾವತಿ, ಎರ್ರಮ್ಮ, ರಾಣಿ ಎಲಿಜೆಬೆತ್, ಮಾರ್ಗರೇಟ್, ಕೊಂಡಮ್ಮ, ಸುಜಾತಾ ಹಾಗೂ ಎಐಟಿಯುಸಿ ಜಿಲ್ಲಾ ಮಂಡಳಿಯ ಎಚ್. ವೀರಣ್ಣ, ಮತ್ತಿಹಳ್ಳಿ ಬಸವರಾಜ್, ನಾಗರತ್ನಮ್ಮ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement