ಅಮಾನತಾದರೂ ಎಚ್ಚೆತ್ತುಕೊಳ್ಳದ ಗ್ರಾಪಂ ಸಿಬ್ಬಂದಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 31
ಗ್ರಾಮ ಪಂಚಾಯಿತಿಗಳಿಂದ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗಲಿ ಎಂಬುದು ಆಳುವ ಸರ್ಕಾರ, ಜನತೆಯ ಆಶಯ. ಆದರೆ ಕೆಲ ಗ್ರಾಮ ಪಂಚಾಯಿತಿಗಳು ಕೆಲಸ ಮಾಡದೇ ಕೇವಲ ಹಣ ದುರುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಿವೆ. ಹಣದ ದುರುಪಯೋಗ, ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ಅಮಾನತಾದರೂ ಎಚ್ಚೆತ್ತುಕೊಳ್ಳದಿರುವುದು ದೊಡ್ಡ ದುರಂತವೇ ಸರಿ.
ಹೌದು, ನಿಯಮ ಉಲ್ಲಂಘನೆ ಆರೋಪದಿಂದಾಗಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ಗ್ರಾಮ ಪಂಚಾಯಿತಿ ಪಿಡಿಒ ಇದೀಗ ಅಮಾನತಿಗೆ ಒಳಗಾಗಿದ್ದಾರೆ. ಈ ಗ್ರಾಪಂ ಸಿಬ್ಬಂದಿಗೆ ಕೆಟ್ಟರೂ ಬುದ್ಧಿ ಬಂದಿಲ್ಲ. ಇನ್ನು ಕೆಲ ಅಧಿಕಾರಿಗಳ ಮಾತಿನ ಪ್ರಕಾರ, ಇಲ್ಲಿ ಕಾರ್ಯನಿರ್ವಹಿಸುವುದು ಕಷ್ಟ.
25ರಲ್ಲಿ 18 ಕಾಮಗಾರಿಗಳು ಸರಿಯಿಲ್ಲ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಾಗತಿ ಬಸಾಪುರ ಗ್ರಾಮ ಪಂಚಾಯಿತಿಯಲ್ಲಿ ರು. 50 ಲಕ್ಷ ವೆಚ್ಚದ ಕಾಮಗಾರಿಯನ್ನು ಪರಿಶೀಲನೆ ಮಾಡುವಾಗ ಹಗರಿಬೊಮ್ಮನಹಳ್ಳಿ ತಾಪಂ ಇಒ ಕಾಮಗಾರಿಗಳಲ್ಲಿ ಲೋಪವನ್ನು ಪತ್ತೆಹಚ್ಚಿದ್ದಾರೆ. ಯೋಜನೆ ಅಡಿಯಲ್ಲಿ ಕೈಗೊಂಡು 25 ಕಾಮಗಾರಿಗಳ ಪೈಕಿ 18 ಕಾಮಗಾರಿಗಳು ಅಂದಾಜು ಪಟ್ಟಿಗೆ ತಕ್ಕಂತೆ ಸರಿಯಾಗಿ ಆಗದಿರುವುದು ಬೆಳಕಿಗೆ ಬಂದಿದೆ. ಇನ್ನು ಹಳೆಯ ತಡೆಗೋಡೆಯನ್ನು ರಿಪೇರಿ ಮಾಡಿ, ಹೊಸದಾಗಿ ಗೋಡೆ ನಿರ್ಮಿಸಲಾಗಿದೆ ಎಂದು ತೋರಿಸಿರುವುದು, ಎರಡು ಕಾಮಗಾರಿಗಳನ್ನು ಕೈಗೊಂಡಿದ್ದರೂ, ಅವುಗಳ ಉಪಯೋಗಕ್ಕೆ ಬಾರದಿರುವುದು ಪರಿಶೀಲನೆಯಿಂದ ತಿಳಿದುಬಂದಿದೆ. ಅವರು ಪರಿಶೀಲನಾ ವರದಿಯನ್ನು ಜಿಪಂ ಸಲ್ಲಿಸಲಿದ್ದಾರೆ.
ಗ್ರಾಪಂ ಅಧ್ಯಕ್ಷರಿಂದ ನಿಯಮ ಉಲ್ಲಂಘನೆ: ಕಾಮಗಾರಿಗೆ ಸಂಬಂಧಿಸಿದ ಕಡತಗಳಿಗೆ ಪಿಡಿಒ ಸಹಿ ಮಾಡದಿರುವುದು, ಗ್ರಾಪಂ ಅಧ್ಯಕ್ಷರು, ಪಿಡಿಒ ಮತ್ತು ತಾಂತ್ರಿಕ ಸಹಾಯರು ಯೋಜನೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಾಮಫಲಕಗಳನ್ನು ಹಾಕದೆ ಹಣ ಪಡೆದಿರುವುದು, ಅಂದಾಜು ಪತ್ರಿಕೆಯ ಅಳತೆಗೆ ತಕ್ಕಂತೆ ಕಾಮಗಾರಿ ಸ್ಥಳದಲ್ಲಿ ಅಳತೆ ಇಲ್ಲದಿರುವುದು, ಗ್ರಾಪಂ ತಾಂತ್ರಿಕ ಸಹಾಯಕರೇ ಅಂದಾಜು ಪಟ್ಟಿ ತಯಾರಿಸಿ, ಅವರೇ ಅಂದಾಜು ಪಟ್ಟಿಗೆ ತಾಂತ್ರಿಕ ಮಂಜೂರಾತಿ ನೀಡುವ, ಅಳತೆ ಪುಸ್ತಕದಲ್ಲಿ ತಾಂತ್ರಿಕ ಸಹಾಯಕರೇ ನಮೂದಿಸಿರುವ ಪ್ರಕರಣಗಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿವೆ. ಈ ಎಲ್ಲ ಹಗರಣಗಳನ್ನು ಇಓ ಜಿಪಂಗೆ ಸಲ್ಲಿಸುವ ವರದಿಯಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ರು. 6.25 ಲಕ್ಷ ನೀಡಿಕೆ, ಪಿಡಿಒ ಅಮಾನತು: ಹಳೆಯ ಕಾಮಗಾರಿಗಳನ್ನು ಹೊಸ ಕಾಮಗಾರಿ ಎಂದು ತೋರಿಸುವುದು ಸೇರಿದಂತೆ ಹಲವು ಅವ್ಯವಹಾರಗಳು ಗ್ರಾಪಂನಲ್ಲಿ ನಡೆದಿದ್ದರೂ ಪಿಡಿಒ ಪರಿಶೀಲನೆ ನಡೆಸದೆ, ಯಾವುದೇ ಕಡತದಲ್ಲಿ ಸಹಿ ಮಾಡದೆ, ತಾಂತ್ರಿಕ ಸಹಾಯಕರಿಗೆ ಸಾಮಗ್ರಿ ವೆಚ್ಚಕ್ಕಾಗಿ ರು. 6.25 ಲಕ್ಷ ಬಿಡುಗಡೆ ಮಾಡಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಜೂ. 21ರಂದು ನಾಗತಿ ಬಸಾಪುರದ ಪಿಡಿಒ ಸುಭಾಷ್ ಮೇಟಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿ, ಶಿಸ್ತಿನ ಕ್ರಮಕ್ಕೆ ಮುಂದಾಗಿದ್ದಾರೆ. ಇದೀಗ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದೆ.
ಕ್ರಿಮಿನಲ್ ಕೇಸ್‌ಗೆ ನಿರ್ದೇಶನ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಸ್ಟಿಸೆಂಟ್ ಪ್ರಾಜೆಕ್ಟ್ ಅಫೀಸರ್ ಪ್ರಕರಣದ ಕುರಿತು ಗ್ರಾಪಂ ತಾಂತ್ರಿಕ ಸಹಾಯಕರು, ಪಿಡಿಒ, ಅಧ್ಯಕ್ಷರ ಮೇಲೆ ಕ್ರಿಮಿನಲ್ ಪ್ರಕರಣ ಹೂಡುವಂತೆ ತಾಪಂ ಇಒಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದೊಂದೇ ಗ್ರಾಮ ಪಂಚಾಯಿತಿಯ ಪರಿಸ್ಥಿತಿ ಇದಲ್ಲ. ಅನೇಕ ಗ್ರಾಪಂಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದೊಂದು ಗ್ರಾಪಂ ಸಿಬ್ಬಂದಿ, ಒಂದಿಲ್ಲೊಂದು ರಾಜಕೀಯ ಪ್ರಭಾವ, ಒತ್ತಡಕ್ಕೆ ಸಿಲುಕಿ ಅಥವಾ ಸಿಬ್ಬಂದಿಯ ಹಣದ ಆಸೆಯಿಂದಾಗಿ ಹಣದ ದುರುಪಯೋಗ, ನಿಯಮ ಉಲ್ಲಂಘನೆ ಮಾಡುವ ಮೂಲಕ ಶಿಸ್ತು ಕ್ರಮಕ್ಕೆ ಗುರಿಯಾಗುತ್ತಿದ್ದಾರೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ನಿಯಮ ಉಲ್ಲಂಘನೆ, ಕರ್ತವ್ಯ ಲೋಪ, ಹಣ ದುರುಪಯೋಗ ಪ್ರಕರಣಗಳು ಹೊರ ಬಾರದೆ, ಅಲ್ಲಿಯೇ ಮುಚ್ಚಿ ಹೋಗುತ್ತಿವೆ.
ಆದರೆ ಗ್ರಾಪಂಗೆ ಇರುವ ಮೂಲ ಆಶಯ ಮಾತ್ರ ಇಂತಹ ಪ್ರಕರಣಗಳಿಂದ ಕಮರಿ ಹೋಗುತ್ತಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ.
-ಶಶಿಧರ ಮೇಟಿ