ಗಿಡ-ಮರ ಬೆಳೆಸುವುದರಿಂದ ಶುದ್ಧ ವಾತಾವರಣ
ಬಳ್ಳಾರಿ: ಗಿಡ-ಮರಗಳನ್ನು ಬೆಳೆಸುವುದರಿಂದ ನಮಗೆ ಶುದ್ಧ ವಾತಾವರಣ ದೊರೆಯುತ್ತದೆ ಎಂದು ಕೊರ್ಲಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಮ್ಮ ಹೇಳಿದರು.
ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತಿಗಳ ಸಂಯುಕ್ತಾಶ್ರಯದಲ್ಲಿ, ಕೋರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗೃಹ ರಕ್ಷಕ ದಳದ ಮಂಜುನಾಥ ಮಾತನಾಡಿ, ಗ್ರಾಮಸ್ಥರು ಮನೆಗೊಂದು ಮರ ನೆಟ್ಟು ಊರಿಗೊಂದು ವನ ನಿರ್ಮಾಣ ಮಾಡಬೇಕೆಂದರು. ಡಾ. ಎಚ್.ಎಂ. ರಾಜಶೇಖರ್ ಮಾತನಾಡಿ, ಗಿಡ-ಮರಗಳನ್ನು ಸಮರೋಪಾದಿಯಲ್ಲಿ ಬೆಳೆಸಬೇಕು. ಇದರಿಂದ ಹವಾಮಾನ ವೈಪರಿತ್ಯ ತಡೆಯುವುದಲ್ಲದೆ ಸಕಾಲಕ್ಕೆ ಮಳೆ ಬೀಳಲಿದೆ ಎಂದರು. ಹೆಬ್ಬೇವು, ನೆಲ್ಲಿಕಾಯಿ, ಬಾದಾಮಿ, ಸಾಗವಾನಿ ಸೇರಿ ನೂರು ಸಸಿಗಳನ್ನು ನೆಡಲಾಯಿತು. ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಸಸಿ ನೆಟ್ಟರು.
ಶಂಕಿತ ಡೆಂಘೀ: ಯುವಕ ಸಾವು
ಕೂಡ್ಲಿಗಿ: ತಾಲೂಕಿನ ಅಡವಿಸೂರವ್ವನಹಳ್ಳಿ ಗ್ರಾಮದಲ್ಲಿ ಅಂಗಡಿ ಗುರುಬಸವರಾಜ (21) ಎಂಬ ಯುವಕ ಶಂಕಿತ ಡೆಂಘೀಯಿಂದ ಬುಧವಾರ ಬೆಳಗಿನ ಜಾವ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾಲ್ಕೈದು ದಿನಗಳಿಂದ ಗುರುಬಸವರಾಜ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಮೊದಲು ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸುಮಾರು ಹದಿನೈದು ದಿನಗಳಿಂದ 25ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕೂಡ್ಲಿಗಿ, ಬೆಳ್ಳಗಟ್ಟೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ವೈದ್ಯರನ್ನು ಅವಲಂಬಿಸಿದ್ದಾರೆ. ಅಲ್ಲದೆ ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗಕ್ಕೆ ತೆರಳಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜನತೆಯಲ್ಲಿ ಭಯದ ವಾತಾವರಣ ಮೂಡಿದ್ದು, ಆರೋಗ್ಯ ಇಲಾಖೆ ಗ್ರಾಮದಲ್ಲೇ ಚಿಕಿತ್ಸೆ ನೀಡುವಂತೆ ಜನತೆ ಆಗ್ರಹಿಸಿದ್ದಾರೆ.