ಪಡಿತರ ಅಕ್ಕಿ ಅಕ್ರಮ ದಾಸ್ತಾನು: ಇಬ್ಬರು ವಶಕ್ಕೆ
ಬಳ್ಳಾರಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಎರಡು ಗೋದಾಮುಗಳ ಮೇಲೆ ದಾಳಿ ನಡೆಸಿ, 229 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡು, ಇಬ್ಬರನ್ನು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ರಾತ್ರಿ ನಗರದ ಹಾವಂಭಾವಿ ಹಾಗೂ ತಾಲೂಕಿನ ಹಲಕುಂದಿಯಲ್ಲಿ ನಡೆದಿದೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ ನೇತೃತ್ವದಲ್ಲಿ ಪೊಲೀಸರೊಂದಿಗೆ ದಾಳಿ ನಡೆಸಿ, ಹಾವಂಭಾವಿ ಪ್ರದೇಶದ ಅಶೋಕನಗದ ಶಿವಕುಮಾರ್ ಎಂಬುವವರ ಗೋದಾಮಿನಲ್ಲಿದ್ದ 104 ಕ್ವಿಂಟಲ್ ಹಾಗೂ ಹಲಕುಂದಿ ಸಮೀಪದ ವೆಂಕೋಬ ಶೆಟ್ಟಿ ಎಂಬುವವರಿಗೆ ಸೇರಿದ ಗೋದಾಮಿನ ಮೇಲೆ ದಾಳಿ ನಡೆಸಿ 125 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.