ಸಾಮಾಜಿಕ ಜವಾಬ್ದಾರಿ ಅರಿತು ವರದಿ ಮಾಡಿ: ನ್ಯಾಯಾಧೀಶ ಭಟ್
ಬಳ್ಳಾರಿ: ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಅರಿತು ವರದಿ ಮಾಡಬೇಕು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತಿಳಿಸಿದರು.
ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುದ್ದಿ ಗುಂಗಿನಲ್ಲಿ ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಮರೆಯಬಾರದು ಎಂದರು. ವಿಎಸ್ಕೆ ವಿವಿ ಕುಲಪತಿ ಡಾ. ಮಂಜಪ್ಪ ಹೊಸಮನಿ ಮಾತನಾಡಿ, ಪತ್ರಿಕೋದ್ಯಮ ಅಧ್ಯಯನ ಮಾಡುವುದರಿಂದ ಹೊಸ ಹೊಸ ಅಧ್ಯಯನದಿಂದ ಹೊಸ ಹೊಸ ಉದ್ಯೋಗಳು ಸೃಷ್ಟಿಯಾಗುತ್ತವೆ ಎಂಬ ಅಭಿಪ್ರಾಯಿಸಿದರು. ಡಿಎಸ್ಪಿ ಸಿ.ಕೆ. ಬಾಬು ಮಾತನಾಡಿ, ಪತ್ರಕರ್ತರು ಯಾವುದೇ ಸುದ್ದಿ ಮಾಡಬೇಕಾದರೆ, ಸುದ್ದಿಯ ವಸ್ತುನಿಷ್ಠತೆ ಬಗ್ಗೆ ಕಾಳಜಿ ಇರಬೇಕು ಎಂದರು. ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜೆ ಅಧ್ಯಕ್ಷತೆವಹಿಸಿ ಮಾತನಾಡಿ, ಪತ್ರಿಕೋದ್ಯಮ ಜೀವನದ ಒಂದು ಭಾಗವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಲು ಆಸಕ್ತಿವಹಿಸಬೇಕೆಂದರು. ಕಾಲೇಜು ಪ್ರಾಚಾರ್ಯ ಪ್ರೊ.ಡಿ. ಗಂಗಣ್ಣ, ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಪಾಟೆ, ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ್, ನಿವೃತ್ತ ಪೊಲೀಸ್ ಅಧಿಕಾರಿ ಶಿವಲಿಂಗಪ್ಪ ಜೂಲಿಕಟ್ಟಿ, ವಕೀಲ ಎನ್.ಎಂ. ಮಹೇಶಪ್ಪ, ರವಿಕುಮಾರ್ ಸೇರಿದಂತೆ ಇತರರು ಇದ್ದರು. ನ್ಯಾಯವಾದಿ ವಿ.ವೈ. ಹಾಲಪ್ಪ, ಹಿರಿಯ ಪತ್ರಕರ್ತ ಸತ್ಯನಾರಾಯಣರಾವ್, ವೇಣುಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಡಾ.ಕೆ. ಬಸಪ್ಪ ಸ್ವಾಗತಿಸಿ, ವಂದಿಸಿದರು.