15ರಂದು ಶ್ರೀ ಎರ್ರಿತಾತ ಮಹಾ ರಥೋತ್ಸವ
ಬಳ್ಳಾರಿ: ಜಿಲ್ಲೆಯ ಧಾರ್ಮಿಕ ಸ್ಥಳಗಳಲ್ಲೊಂದಾದ ಬಳ್ಳಾರಿ ತಾಲೂಕಿನ ಗಡಿಗ್ರಾಮ ಚೇಳ್ಳಗುರ್ಕಿ ಶ್ರೀ ಎರ್ರಿತಾತನವರ ಮಹಾರಥೋತ್ಸವ ಜೂ. 15ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್. ಬಾಳನಗೌಡ ತಿಳಿಸಿದ್ದಾರೆ.
ರಥೋತ್ಸವದಂಗವಾಗಿ ಜೂ. 8ರಂದು ಸಪ್ತಭಜನಾ ಕಾರ್ಯಕ್ರಮ ಆರಂಭವಾಗಲಿದೆ. ಏಳು ದಿನಗಳ ಕಾಲ 24 ಗಂಟೆ ಓಂ ನಮಃ ಶಿವಾಯ ಎಂದು ಪಠಿಸುತ್ತಾ ಹಾಡು ಹಾಗೂ ಕುಣಿತದೊಂದಿಗೆ ದೇವರಿಗೆ ವಿವಿಧ ಗ್ರಾಮಸ್ಥರು ಭಕ್ತಿ ಸೇವೆ ಮಾಡಲಿದ್ದಾರೆ. ಜೂ. 8ರ ಬೆಳಗ್ಗೆ 6ಕ್ಕೆ ಉರವಕೊಂಡ ಗವಿಮಠದ ಶ್ರೀ ಚನ್ನಬಸವ ರಾಜೇಂದ್ರ ಸ್ವಾಮೀಜಿ ನಂದಿ ಧ್ವಜಾರೋಹಣ ಹಾಗೂ ಸಪ್ತಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜೂ. 8ರಂದು ಸಂಜೆ 7ಕ್ಕೆ ಬೆಳ್ಳಿ ರಥೋತ್ಸವ ನಡೆಯಲಿದೆ. ಜೂ. 14ರಂದು ಸಂಜೆ 6ಕ್ಕೆ ಬಸವನ ಉತ್ಸವ ನಡೆಯಲಿದೆ. ರಾತ್ರಿ 10ಕ್ಕೆ ವಟುಗಳ ದಿಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜೂ. 15ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ. ನಂತರ ಕರ್ಪೂರದ ಆರತಿ ನಡೆಯಲಿದೆ. ಶಂಕರಬಂಡೆಯ ಮಂಜುನಾಥ್ ಕರ್ಚೇಡ್, ಜ್ಞಾನಪ್ರಭು ಕುಟುಂಬದವರು ಮಹಾರಥೋತ್ಸವ ದಿನದ ದಾಸೋಹ ಸೇವೆ ನಡೆಯಲಿದೆ. ಅಂದು ರಾತ್ರಿ 11 ಗಂಟೆಗೆ ಅಭಿನಯ ಕಲಾ ಕೇಂದ್ರದಿಂದ ಶ್ರೀ ಚೇಳ್ಳಗುರ್ಕಿ ಎರ್ರಿತಾತ ನಾಟಕ ಪ್ರದರ್ಶನಗೊಳ್ಳಲಿದೆ. ಜೂ. 16ರಂದು ರಾತ್ರಿ 7ಕ್ಕೆ ಹೂವಿನ ರಥೋತ್ಸವ ನಂತರ ಬಾಣೋತ್ಸವ ನಡೆಯಲಿದೆ. ಜೋಳದರಾಶಿಯ ಚಿಲಕರಾಯ ಬಸಮ್ಮ ಮತ್ತು ಕುಟುಂಬದವರು ಹಾಗೂ ದಿ. ಈಡಿಗರ ದೊಡ್ಡ ಎರ್ರೆಪ್ಪ, ದಿ. ಹುಚ್ಚಮ್ಮ ಅವರ ನೆನಪಿಗಾಗಿ ಅವರ ಕುಟುಂಬದವರು ಹೂವಿನ ರಥೋತ್ಸವ ದಿನದ ದಾಸೋಹ ಸೇವೆ ನೀಡಲಿದ್ದಾರೆ ಎಂದು ಹೇಳಿದರು.