ಕೊಟ್ಟೂರು: ವಾಹನಗಳ ಶುಲ್ಕ ವಸೂಲಿಗೆ ಮತ್ತೆ ಚಾಲನೆ
ಕೊಟ್ಟೂರು: ಕೊಟ್ಟೂರು ಪಪಂನ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಕಾಲಕ್ಕೆ ನಿಲುಗಡೆಗೊಂಡಿದ್ದ ದಿನವಹಿ ಮಾರುಕಟ್ಟೆ, ವಾರದ ಮಾರುಕಟ್ಟೆ ಮತ್ತು ವಾಹನಗಳ ಶುಲ್ಕ ವಸೂಲು ಮಾಡುವ ಕಾರ್ಯಕ್ಕೆ ಆಡಳಿತಾಧಿಕಾರಿ ಮತ್ತೆ ಚಾಲನೆ ನೀಡಿ ಪಪಂಗೆ ಸಂಪನ್ಮೂಲಗಳನ್ನು ಕ್ರೋಡಿಕರಿಸುವ ಕಾರ್ಯಕ್ಕೆ ಮುಂದಾಗಿರುವುದು ಸಣ್ಣ ವ್ಯಾಪಾರಸ್ಥರನ್ನು ನಿದ್ದೆಗೆಡಿಸಿದೆ.
ಈಗ್ಗೆ 3 ವರ್ಷಗಳ ಹಿಂದೆ ಜನಪ್ರತಿನಿಧಿಗಳ ಆಡಳಿತ ಪಟ್ಟಣದ ದಿನವಹಿ ವ್ಯಾಪಾರಸ್ಥರ ಕೂಗಿಗೆ ಸ್ಪಂದಿಸಿ ಈ ಬಗೆಯ ಶುಲ್ಕ ವಸೂಲಾತಿ ಪ್ರಕ್ರಿಯೆಯನ್ನು ನಿಲುಗಡೆಗೊಳಿಸಿತ್ತು. ಇನ್ನೇನು ಮತ್ತೆ ಚುನಾಯಿತ ಪ್ರತಿನಿಧಿಗಳು ಶೀಘ್ರದಲ್ಲೇ ಪಪಂ ಆಡಳಿತದ ಚುಕ್ಕಾಣಿ ಹಿಡಿಯಲು ಅವಕಾಶ ಒದಗಿ ಬರುತ್ತಿರುವ ಈ ಗಳಿಗೆಯಲ್ಲಿ ಶುಲ್ಕ ವಸೂಲಾತಿ ಕ್ರಮವನ್ನು ಜಾರಿಗೊಳಿಸಿರುವುದಲ್ಲದೇ ಕಳೆದ 2 ವಾರಗಳಿಂದ ಶುಲ್ಕ ವಸೂಲಾತಿ ಪ್ರಕ್ರಿಯೆ ಪಟ್ಟಣದಲ್ಲಿ ಜೋರಾಗಿಯೇ ಸಾಗಿದೆ.
ಪ್ರತಿಯೊಂದು ಖಾಸಗಿ ಲಾರಿಗಳಿಗೆ 20, ಖಾಸಗಿ ಬಸ್ಗಳಿಗೆ 10, ಟ್ರ್ಯಾಕ್ಸ್, ಮಿನಿ ಲಾರಿ, ಮತ್ತು ವ್ಯಾನ್ಗೆ ತಲಾ 10 ರೂಗಳ ಶುಲ್ಕ, ಪ್ರತಿ ದಿನಕ್ಕೆ ನಿಗದಿಗೊಂಡಿದ್ದರೆ, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಮತ್ತು ರಸ್ತೆಯ ಮಗ್ಗುಲಲ್ಲಿ ವ್ಯಾಪಾರ ನಡೆಸುವವರು ದಿನವೊಂದಕ್ಕೆ 5 ನೀಡಬೇಕಲ್ಲದೇ ಪ್ರತಿಯೊಂದಕ್ಕೂ 5ಗಳನ್ನು ಶುಲ್ಕವಾಗಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ವಾರದ ಮಾರುಕಟ್ಟೆ ಶುಲ್ಕವೆಂದು ಪ್ರತಿಯೊಂದು ಪುಟ್ಟ ಚೀಲದ ತರಕಾರಿ ತಳ್ಳುಗಾಡಿಗೆ 10ಗಳನ್ನು ಮೀಸಲಿರಿಸಿರುವ ಕುರಿತು ಪಪಂ ಆಡಳಿತಾಧಿಕಾರಿ ಜವರೇಗೌಡ ಆದೇಶಿಸಿದ್ದಾರೆ.
ಆಡಳಿತಾಧಿಕಾರಿಗಳ ಆದೇಶದ ಮೇರೆಗೆ ಮುಖ್ಯಾಧಿಕಾರಿ ಇದಕ್ಕೆಂದೇ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಶುಲ್ಕ ವಸೂಲಾತಿ ಆರಂಭಿಸಿದ್ದಾರೆ.
ಸಂಗ್ರಹ: ದಿನವಹಿ ಶುಲ್ಕ ವಸೂಲು ಪ್ರಕ್ರಿಯೆ ಆರಂಭಗೊಂಡ ದಿನದಿಂದ ಪ್ರತಿ ದಿನ 800ನಿಂದ 900ವರೆಗೆ ಸಂಗ್ರಹಗೊಳ್ಳುತ್ತಿದೆ. ಮೇ 23ರಿಂದ ಈ ಆದೇಶ ಜಾರಿಗೊಂಡಿದ್ದು, ಅಂದಿನಿಂದಲೂ ತೆರಿಗೆ ಸಂಗ್ರಹ ಉತ್ತಮ ರೀತಿ ಸಾಗಿದೆ ಎಂದು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಪಪಂ ಸಿಬ್ಬಂದಿ ರಾಜಭಕ್ಷಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಹನುಮಂತಮ್ಮ, ಪಪಂ ಸಂಪನ್ಮೂಲದ ಶೇಖರಣೆಗಾಗಿ ಈ ಕ್ರಿಯೆಗೆ ತೊಡಗಿಸಿಕೊಂಡಿದ್ದೇವೆ. ಅತ್ಯಂತ ಕಡಿಮೆ ದರದಲ್ಲಿ ಶುಲ್ಕ ವಸೂಲಾತಿ ನಿಗದಿಗೊಳಿಸಲಾಗಿದೆ. ಪ್ರತಿ ವ್ಯಾಪಾರಸ್ಥರು ಯಾವುದೇ ಬಾಧೆ ಇಲ್ಲದೇ ಶುಲ್ಕ ನೀಡಬಹುದು. ಇದರಿಂದ ಪಪಂಗೆ ನಿಂತುಹೋಗಿದ್ದ ಕಂದಾಯ ಸೇರುತ್ತದೆ.
ಜನವಿರೋಧಿ ನಿಲುವು: ಪಪಂ ಆಡಳಿತಾಧಿಕಾರಿ ಇದೀಗ ದಿಢೀರನೆ ದಿನವಹಿ, ವಾರ ಶುಲ್ಕ ಸಂಗ್ರಹಕ್ಕೆ ಚಾಲನೆ ನೀಡುವ ಮೂಲಕ ಜನ ವಿರೋಧಿ ನೀತಿ ತೆಗೆದುಕೊಂಡಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಜೀವನ ಸಾಗಲೆಂದೇ ಸಣ್ಣ ವ್ಯಾಪಾರ ಮಾಡುತ್ತಿದ್ದೂ, ತೆರಿಗೆ ವಸೂಲಿ ಅವರಿಗೆ ಹೊರೆಯಾಗಿದೆ. ಈ ಕಾರಣಕ್ಕಾಗಿಯೇ ನಿಲುಗಡೆಗೊಂಡಿತ್ತು. ಜನಪ್ರತಿನಿಧಿಗಳ ಆಡಳಿತ ಇಲ್ಲದ ಸಮಯದಲ್ಲಿ ಜಾರಿಗೆಗೊಂಡಿರುವ ಈ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆಡಳಿತ ಹೊಂದುವ ನಾವುಗಳು ಖಂಡಿತಾ ರದ್ದುಗೊಳಿಸಿ ಜನರ ಹಿತಕಾಪಾಡಲಿದ್ದೇವೆ ಎಂದು ಪಪಂ ಸದಸ್ಯ ಟಿ. ಮಂಜುನಾಥ ಪ್ರತಿಕ್ರಿಯಿಸಿದರು.