ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ: ವಿಜಯಕುಮಾರ್
ಬಳ್ಳಾರಿ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಸಮರ್ಥವಾಗಿ ರೂಪಿಸಿಕೊಂಡು ಆಧುನಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ. ವಿಜಯಕುಮಾರ ಹೇಳಿದರು.
ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಮತ್ತು ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗ, ಕೌಶಲ್ಯಾಭಿವೃದ್ಧಿ ಕೇಂದ್ರ ಹಾಗೂ ಉದ್ಯೋಗಾವಕಾಶ ಕೇಂದ್ರಗಳನ್ನು ತೆರೆಯಲಿದೆ. ಅಲ್ಲದೇ ವಿದ್ಯಾರ್ಥಿಗಳಿಗಾಗಿ ರು. 1 ಲಕ್ಷ ಜೀವ ವಿಮೆ ಸೌಲಭ್ಯವನ್ನು ವಿವಿ ಆರಂಭಿಸಲಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಚಿಂತನೆಯಲ್ಲಿ ಸಾಮ್ಯತೆ: ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಮನುಕುಲದ ಸಮಸ್ಯೆಗಳ ನಿರ್ಮೂಲನೆಗಾಗಿ ಶ್ರಮಿಸಿದ ಭಗವಾನ್ ಬುದ್ಧ ಮತ್ತು ವಿಶ್ವಗುರು ಬಸವಣ್ಣನವರ ಚಿಂತನೆಗಳು ಆದರ್ಶಮಯವಾಗಿದ್ದು. ಅವುಗಳನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಈ ಇಬ್ಬರು ಮಹಾತ್ಮರು ಬದುಕಿನ ಸತ್ಯವನ್ನು ಹುಡುಕಲು ಹೊರಟು ದುಃಖಿತರ ಕಣ್ಣೀರು ಒರೆಸಿದರು. ಇವರಿಬ್ಬರ ಚಿಂತನೆಗಳಲ್ಲಿ ಸಾಮ್ಯತೆ ಇದ್ದು, ವೇದಗಳನ್ನು ಪ್ರಶ್ನಿಸಿ ಸಮಾನ ಸಮಾಜದ ನಿರ್ಮಾಣಕ್ಕಾಗಿ ಕನಸು ಕಂಡಿದ್ದರು. ಅವರ ಚಿಂತನೆಗಳು ಹೆಚ್ಚು ಸಮಂಜಸ ಮತ್ತು ಸಮಕಾಲೀನ ಎಂದರು.
ಗದುಗಿನ ಡಾ. ಶಂಭು ಬಳಿಗಾರ ಮಾತನಾಡಿದರು. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಂ.ವಿ. ರುದ್ರಮುನಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಾನ್ ಬುದ್ಧ ಮತ್ತು ವಿಶ್ವಗುರು ಬಸವಣ್ಣನವರ ತತ್ವ, ಆದರ್ಶಗಳು ಅನುಕರಣೀಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಿದ್ದು, ಸಂಗಡಿಗರು ನಾಡಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೌರಿ ಮಾನಸ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ಪಿ.ಸಿ. ನಾಗನೂರ ಪ್ರಾಸ್ತಾವಿಕ ಮಾತನಾಡಿದರು. ಅಂಬರೀಶ್ ವಂದಿಸಿದರು.