ಪರಂಪರೆ ಉಳಿಸಿ ಬೆಳೆಸಿ: ಕೆ. ರಂಗಸ್ವಾಮಿ
ಹೊಸಪೇಟೆ: ನಮ್ಮ ಪರಂಪರೆಯ ಕುಸ್ತಿ ಪಟುಗಳನ್ನು ಸಿದ್ಧಗೊಳಿಸುವ ಗರಡಿ ಮನೆಗಳು ಇಂದಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ನಗರಸಭೆ ಪೌರಾಯುಕ್ತ ಕೆ. ರಂಗಸ್ವಾಮಿ ಹೇಳಿದರು.
ನಗರದಲ್ಲಿ ಇತ್ತೀಚಿಗೆ ಮ್ಯಾಸಕೇರಿಯಲ್ಲಿ ಗರಡಿ ಮನೆ ಉದ್ಘಾಟಿಸಿ ಮಾತನಾಡಿದ ಅವರು, ಕೇರಿಯ ಜನರು ಈಗಲೂ ಗರಡಿ ಮನೆಯನ್ನು ಸ್ಥಾಪಿಸಿ ಯುವಜನರಿಗೆ ಗರಡಿ ಮನೆಯ ಬಗ್ಗೆ ಆಸಕ್ತಿ ಮೂಡಿಸುತ್ತಿರುವುದು ಸ್ವಾಗತಾರ್ಹ. ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಆಚರಿಸುತ್ತಲೇ ಬಂದಿರುವ ನಮ್ಮ ಪರಂಪರೆ ಉಳಿಸಿ, ಪ್ರೋತ್ಸಾಹಿಸುವಂತ ಪ್ರಯತ್ನ ನಡೆಯಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಜನತೆ ಕೈಗೊಡಿರುವ ನಿರ್ಧಾರ ಸರಿಯಾಗಿದೆ ಎಂದರು.
ರು. 17 ಲಕ್ಷ: ನಗರಸಭೆ ಎಸ್ಎಫ್ಸಿಯಿಂದ ರು. 10 ಲಕ್ಷ ಅನುದಾನ ಹಾಗೂ ರು. 7 ಲಕ್ಷ ಸಂಗ್ರಹಿಸಿದ ಹಣದಿಂದ ಈ ಗರಡಿ ಮನೆಯನ್ನು ವ್ಯವಸ್ಥಿತ ವಾಗಿ ನಿರ್ಮಾಣ ಮಾಡಲಾಗಿದೆ.
ನಗರಸಭೆ ಅಧಿಕಾರಿ ಸೈಯದ್ ಮನ್ಸೂರ್, ಮ್ಯಾಸಕೇರಿಯ ನೆನಗಡ್ಲಿ ವೆಂಕೋಬಣ್ಣ, ನಾಣಿಕೇರಿ ತಿಮ್ಮಯ್ಯ, ತಾರಿಹಳ್ಳಿ ಹುಲುಗಜ್ಜಪ್ಪ, ಜಂಬಾನಹಳ್ಳಿ ಸತ್ಯನಾರಾಯಣ, ಜಂಬಾನಹಳ್ಳಿ ಪರುಶುರಾಮಪ್ಪ, ಹೂಡಾ ಮಾಜಿ ಸದಸ್ಯ ತಾರಿಹಳ್ಳಿ ವೆಂಕಟೇಶ್, ವಕೀಲ ತಾರಿಹಳ್ಳಿ ವೆಂಕಟೇಶ್ ಹಾಗೂ ಮ್ಯಾಸಕೇರಿ ದೈವಸ್ಥರು ಮತ್ತು ಇತರರು ಉಪಸ್ಥಿತರಿದ್ದರು.