ಸುದ್ದಿ ಸಂಕ್ಷೇಪ
ಇಂದು ಸಂಪರ್ಕ ಕಾರ್ಯಕ್ರಮ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ಸಂಪರ್ಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕನ್ನಡ ವಿವಿಯ ಭುವನ ವಿಜಯದಲ್ಲಿ ಜೂ. 3ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಚ್.ಎಸ್. ಈಶ್ವರ, ಹಿರಿಯ ಪತ್ರಕರ್ತ ಈಶ್ವರ ದೈತೋಟ ಅತಿಥಿಗಳಾಗಿ ಭಾಗವಹಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು ಎಂದು ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ. ವಿಠಲರಾವ್ ಗಾಯಕ್ವಾಡ್, ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ನಗರದ ವಿವಿಧ ಭಾಗಗಳಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ಕೈಗೊಳ್ಳಲಾಗುವುದರಿಂದ ಜೂ. 3 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಶ್ರೀರಾಂಪುರ ಕಾಲೋನಿ, ರೂಪನಗುಡಿ ರಸ್ತೆ, ಅಂಜಿನಪ್ಪ ನಗರ, ವಡ್ಡರಬಂಡಿ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಎಇ ಶಶಿಧರ ಶಿವಾಚಾರ್ಯ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಬಳ್ಳಾರಿ: ಬಿಜಾಪುರ ತಾಲೂಕಿನ ಆಹೇರಿ ಗ್ರಾಮದ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ, ಸಂಸ್ಕೃತಿ ವೇದಿಕೆಯು ಬಸವ ಜಯಂತಿ ಹಾಗೂ ರಾಜ್ಯ ಮಟ್ಟದ ವಚನೋತ್ಸವ ಕಾರ್ಯಕ್ರಮದ ನಿಮಿತ್ತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಂದ 2013-14ನೇ ಸಾಲಿನ ಬಸವಜ್ಯೋತಿ ರಾಜ್ಯ ಪ್ರಶಸ್ತಿ ಮತ್ತು ಬಸವರತ್ನ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಸಮಾಜದ ಪ್ರಗತಿಪರ ಅಭಿವೃದ್ಧಿಗಾಗಿ ಕನ್ನಡ ರಕ್ಷಣೆ, ಸಂಸ್ಕೃತಿ, ರಂಗಭೂಮಿ, ನೃತ್ಯ, ಸಂಗೀತ, ಪತ್ರಿಕೋದ್ಯಮ, ಚಿತ್ರಕಲೆ, ಶಿಕ್ಷಣ, ಛಾಯಾಚಿತ್ರ, ಚಲನಚಿತ್ರ, ಸಮಾಜಸೇವೆ, ಶಿಲ್ಪಕಲೆ, ಕ್ರೀಡೆ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ಜಾನಪದ, ಯಕ್ಷಗಾನ, ಭರತನಾಟ್ಯ, ಸಂಘ, ಸಂಸ್ಥೆ, ಇತರೆ ಹಾಗೂ ಸರ್ಕಾರದ ವಿವಿಧ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸ ಬಯಸುವವರು ತಮ್ಮ ಇತ್ತೀಚಿನ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಂಪೂರ್ಣ ವಿವರಗಳನ್ನೊಳಗೊಂಡ ಮಾಹಿತಿಯನ್ನು ಬಂಡೆಪ್ಪ ತೇಲಿ, ಅಧ್ಯಕ್ಷರು, ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ, ಸಂಸ್ಕೃತಿ ವೇದಿಕೆ, ಆಹೇರಿ ಅಂಚೆ- 586112 ತಾ. ಜಿ. ವಿಜಾಪುರ. ಇವರಿಗೆ ಜೂನ್ 17ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9008845750ಗೆ ಸಂಪರ್ಕಿಸುವಂತೆ ಸಂಘದ ಅಧ್ಯಕ್ಷರು ಕೋರಿದ್ದಾರೆ.