ಡೊನೇಷನ್ ಹಾವಳಿ ತಪ್ಪಿಸಿ: ಕರವೇ ಆಗ್ರಹ
ಹೊಸಪೇಟೆ: ತಾಲೂಕಿನಲ್ಲಿ ವಿಪರೀತ ದೇಣಿಗೆ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರವೇ ಮಹಿಳಾ ಘಟಕದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿ ಕೊಡೆಗಳಂತೆ ನಿತ್ಯವೂ ತೆಲೆ ಎತ್ತುತ್ತಿದ್ದು, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವುದರಿಂದ ಬಡ ಮತ್ತು ಮಧ್ಯಮ ಕುಟುಂಬದ ಪಾಲಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕೆಲವರಿಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆಗುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತವೆ ಎಂಬ ಭಾವನೆಯಿಂದ ಮಕ್ಕಳನ್ನು ಸೇರಿಸಲು ಹೋದರೆ ಸಾಕಷ್ಟು ಡೊನೇಷನ್ ಕೇಳುತ್ತಿರುವುದು ಕಂಡುಬಂದಿದೆ.
ತಾಲೂಕಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಬಿಲ್ಡಿಂಗ್ ಫಂಡ್ ಎಂಬ ಹೆಸರಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಹಗಲು ದರೋಡೆಗೆ ಇಳಿದಿದ್ದು, ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡೊನೇಷನ್ ತೆಗೆದುಕೊಳ್ಳುವ ಶಾಲೆಗಳ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ. ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಬಾರದೇ ಹೋದಲ್ಲಿ ವೇದಿಕೆಯಿಂದ ಬಿಇಓ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಎಚ್. ಎಸ್. ಹೇಮಾವತಿ, ನಗರ ಘಟಕದ ಅಧ್ಯಕ್ಷೆ ಆರ್. ಲತಾ ಎಚ್ಚರಿಸಿದ್ದಾರೆ.