ತುಂಗಭದ್ರೆ ಒಡಲು ಕಲುಷಿತ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 3
ಪುರಾಣ ಪುಣ್ಯ ಕಥೆಗಳದಿಂದಲೂ ಭಾರತದಲ್ಲಿ ನದಿಗಳಿಗೆ ಪವಿತ್ರ ಸ್ಥಾನವಿದೆ. ಈ ಕಾರಣದಿಂದಲೇ 'ಗಂಗಾ ಸ್ನಾನ ತುಂಗಾ ಪಾನ' ವೆಂಬ ಗಾದೆ ಮಾತು ಜನನಿತವಾಗಿದೆ. ಆದರೆ ಈಗ ಕಾಲ ಬದಲಾಗಿದ್ದು, ನದಿ ತೀರದ ಹಳ್ಳಿಗಳು ಮತ್ತು ದೊಡ್ಡ ಪಟ್ಟಣ ಪ್ರದೇಶಗಳ ಚರಂಡಿ ನೀರು, ಘನತ್ಯಾಜ್ಯ ವಸ್ತುಗಳು ತುಂಗಭದ್ರೆ ಒಡಲು ಸೇರಿ ಸಂಪೂರ್ಣ ಕಲುಷಿತಗೊಂಡಿದ್ದಾಳೆ.
ರಾಜ್ಯದಲ್ಲಿ 640 ಕಿ.ಮೀ. ಉದ್ದಗಲಕ್ಕೂ ಹರಿಯುತ್ತಾ ತನ್ನ ವಿಸ್ತಾರ ಹೊಂದಿರುವ ತುಂಗಭದ್ರಾ ನದಿ ತೀರದ ಬಹುತೇಕ ಗ್ರಾಮ, ನಗರ, ಪಟ್ಟಣಗಳ ಚರಂಡಿ ನೀರಿನ ಜತೆಗೆ, ಸಾಕಷ್ಟು ಘನತ್ಯಾಜ್ಯ ವಸ್ತುಗಳು ನದಿಗೆ ಸೇರಿ ನದಿ ಚರಂಡಿಯಾಗುತ್ತಿದೆ. ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗೂ ಸಂಚಕಾರ ಬಂದೊದಗಿದೆ. ಕಳೆದೆರಡು ವರ್ಷದ ಹಿಂದೆ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ನದಿ ನೀರು ಶುದ್ಧತೆಯನ್ನು ಕಾಯಲು ಯಾವುದೇ ತೆರನಾದ ಘನತ್ಯಾಜ್ಯ ವಸ್ತುಗಳನ್ನು ನದಿಗೆ ಬಿಡದಂತೆ ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಈ ಕ್ರಿಯಾ ಯೋಜನೆ ಮೇಲಧಿಕಾರಿಗಳ ಬಳಿ ಧೂಳು ತಿನ್ನುತ್ತಿದೆ.
ಈಗಾಗಲೇ ನದಿ ತೀರದ ಹರಿಹರ ಪಾಲಿ ಫೈಬರ್ನಿಂದಲೂ ಕಲುಷಿತ ನೀರು ನದಿಗೆ ಹರಿಯುತ್ತಿದೆ. ನದಿ ತೀರದ ನೂರಾರು ದೇವಸ್ಥಾನಗಳ ಜಾತ್ರೆ ಸೇರಿದಂತೆ ತಾಲೂಕಿನ ಮೈಲಾರ, ಕುರುವತ್ತಿ, ಮದಲಗಟ್ಟಿ ಜಾತ್ರೆಗಳಲ್ಲಿ ಬಳಕೆಯಾಗಿರುವ ಘನತ್ಯಾಜ್ಯ ವಸ್ತುಗಳು ನದಿ ನೀರಿಗೆ ಸೇರಿಕೊಳ್ಳುತ್ತಿದ್ದು, ನೀರು ಮಲಿನವಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಬಳ್ಳಾರಿ ಜಿಪಂಗೆ ಕ್ರಿಯಾ ಯೋಜನೆ ತಯಾರಿಸಿ 2 ವರ್ಷ ಕಳೆದರೂ ಜಾರಿಯಾಗಿಲ್ಲ.
ಯೋಜನೆ ವ್ಯಾಪ್ತಿಯ ತಾಲೂಕುಗಳು: ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ನದಿ 254 ಕಿ.ಮೀ. ಉದ್ದ ಹರಿಯುತ್ತಿದೆ. ಈ ಯೋಜನೆ ವ್ಯಾಪ್ತಿಗೆ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಮತ್ತು ಸಿರುಗುಪ್ಪ ಸೇರಿ 4 ತಾಲೂಕುಗಳ 81 ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ಕ್ರಿಯಾ ಯೋಜನೆಯಲ್ಲಿದೆ.
ಮಳೆಗಾಲ ಸೇರಿ ಇನ್ನಿತರ ದಿನಗಳಲ್ಲಿ ನದಿ ನೀರಿಗೆ ಬಿಡಲಾಗುತ್ತಿರುವ ಘನತ್ಯಾಜ್ಯ ವಸ್ತುಗಳನ್ನು ತಡೆಯಲು ಗ್ರಾಮಗಳಲ್ಲಿ 2 ಕಿ.ಮೀ. ಉದ್ದದ ಒಳ ಚರಂಡಿ, ಪ್ಲಾಸ್ಟಿಕ್ ಮತ್ತು ಇನ್ನಿತರ ವಸ್ತುಗಳನ್ನು ನಿರ್ವಹಣೆ ಮಾಡಲು ಗ್ರಾಮಗಳಲ್ಲಿ ಸಿಮೆಂಟ್ ತೊಟ್ಟಿಗಳ ಅಳವಡಿಕೆ, ಮಳೆ ನೀರಿನಲ್ಲಿ ತೇಲಿ ಹೋಗುವ ವಸ್ತುಗಳನ್ನು ತಡೆಯಲು ನದಿಗೆ ಹೋಗುವ ದಾರಿಯಲ್ಲಿ 3-4 ಇಂಗು ಗುಂಡಿಗಳ ಕಾಮಗಾರಿಗಳೂ ಯೋಜನೆಯಲ್ಲಿ ಸೇರಿವೆ.
ಗ್ರಾಮದಲ್ಲಿ ಹಾಕುವ ಕಸದ ತೊಟ್ಟಿಗಳಲ್ಲಿನ ಪ್ಲಾಸ್ಟಿಕ್ ಹಾಗೂ ಕೊಳೆಯುವ ವಸ್ತುಗಳನ್ನು ಬೇರ್ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಂಡು ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳನ್ನು ಸುಡಲು ಪ್ಲಾಂಟ್ಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆ ಮೂಲಕ ನದಿಗೆ ಘನತ್ಯಾಜ್ಯ ವಸ್ತುಗಳು ಸೇರದಂತೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈ ಯೋಜನೆ ತುಕ್ಕು ಹಿಡಿಯುವ ಹಂತಕ್ಕೆ ಬಂದರೂ ಇನ್ನು ಜಾರಿಯಾಗಿಲ್ಲ. ಇದರಿಂದಾಗಿ ನದಿಯಲ್ಲಿ ಜಲಚರ ಪ್ರಾಣಿಗಳಿಗೂ ಕುತ್ತು ಒದಗಿದೆ.
ಹಳ್ಳ ಹಿಡಿದ ಘನತ್ಯಾಜ್ಯ: ಹೂವಿನಹಡಗಲಿ ಪುರಸಭೆ ಘನತ್ಯಾಜ್ಯ ನಿರ್ವಹಣೆಗೆಂದೆ ಸುಮಾರು 15 ಎಕರೆ ಜಮೀನಿನಲ್ಲಿ ರು. 55 ಲಕ್ಷ ಕಾಂಪೌಂಡ್ ಸೇರಿದಂತೆ ಕಸ ವಿಲೇವಾರಿಗೆ ಗುಂಡಿಗಳನ್ನು ತೋಡಲಾಗಿದೆ. ಆದರೆ ಪುರಸಭೆ ಸಿಬ್ಬಂದಿ ರಾಜ್ಯ ಹೆದ್ದಾರಿ ಬಳಿ ಇರುವ ಹೊಳಗುಂದಿ ರಸ್ತೆಯ ದೊಡ್ಡ ಹಳ್ಳದ ಗುಂಡಿಗೆ ಹಾಕಲಾಗಿದೆ. ಮಳೆ ಬಂದಾಗ ಇಡೀ ಘನತ್ಯಾಜ್ಯ ವಸ್ತುಗಳು ತುಂಗಭದ್ರಾ ನದಿ ಸೇರಿ ನದಿಯನ್ನು ಕಲುಷಿತ ಮಾಡಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿ ನಾಗಪ್ಪ ಅವರನ್ನು ಮಾತನಾಡಿಸಿದಾಗ, ಈ ಕುರಿತು ಕ್ರಮ ಕೈಗೊಳ್ಳಲು ನೋಟಿಸ್ ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿಲ್ಲ. 4 ವರ್ಷಗಳ ಹಿಂದೆಯೇ ನೇಮಕವಾಗಬೇಕಿತ್ತು. ಈಗ ಮತ್ತೆ ಕ್ರಿಯಾ ಯೋಜನೆ ತಯಾರಿಸಿ ಸಿಬ್ಬಂದಿ ನೇಮಿಸಲಾಗುವುದು ಎನ್ನುತ್ತಾರೆ.
ಚರಂಡಿಯ ನೀರು ಮತ್ತು ಘನತ್ಯಾಜ್ಯ ವಸ್ತುಗಳನ್ನು ನದಿಗೆ ಬಿಡಬಾರದೆಂದು ಸುಪ್ರೀಂ ಕೋರ್ಟ್ ಈಗಾಗಲೆ ಆದೇಶಿಸಿದೆ. ಸರ್ಕಾರಕ್ಕೆ ಈ ಹಿಂದೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳಿಸಲಾಗಿತ್ತು ಎನ್ನುತ್ತಾರೆ ಜಿಪಂ ಸಿಇಓ ಮಂಜುನಾಥ ನಾಯಕ್.
ಪವಿತ್ರವಾಗಿದ್ದ ತುಂಗಭದ್ರಾ ಹಂತ ಹಂತವಾಗಿ ಅಪವಿತ್ರವಾಗುತ್ತಿದೆ. ಸರ್ಕಾರ ನದಿಯ ಪಾವಿತ್ರ್ಯ ಉಳಿಸಿಕೊಳ್ಳಲು ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಿದೆ.
ಚಂದ್ರು ಕೊಂಚಿಗೇರಿ