ದಲಿತ ಮುಖಂಡ ಚಲಪತಿ ಕೊಲೆ
ಬಳ್ಳಾರಿ: ದಲಿತ ಮುಖಂಡನೋರ್ವನನ್ನು ಐವರು ದುಷ್ಕರ್ಮಿಗಳು ಕಬ್ಬಿಣದ ರಾಡಿನಿಂದ ತಲೆ ಮತ್ತು ಮುಖದ ಭಾಗಕ್ಕೆ ಬಲವಾಗಿ ಹೊಡೆದು ಕೊಲೆಗೈದಿರುವ ಘಟನೆ ಬಳ್ಳಾರಿ-ಅನಂತಪುರ ರಸ್ತೆಯಲ್ಲಿರುವ ಸರ್ಕಾರಿ ಅತಿಥಿ ಗೃಹದ ಮುಂಭಾಗದಲ್ಲಿ ಮಂಗಳವಾರ ಸಂಜೆ ಜರುಗಿದೆ.
ನಗರದ ಶ್ರೀರಾಂಪುರ ಕಾಲೋನಿ ನಿವಾಸಿ ಎನ್.ಎಸ್.ಚಲಪತಿ(38) ಎಂಬುವವರು ಶ್ರೀರಾಂಪುರ ಕಾಲೋನಿಯಿಂದ ಸಂಜೆ 6.30ರ ಸುಮಾರಿಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಐವರು ದುಷ್ಕರ್ಮಿಗಳು ಬೈಕ್ ಮೇಲೆ ಬಂದು ದಾಳಿ ನಡೆಸಿ, ತಲೆ ಮತ್ತು ಮುಖದ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಚಲಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ಯೆ ನಡೆದ ಸ್ಥಳದಲ್ಲಿ ಒಂದು ಮೊಬೈಲ್ ಪತ್ತೆಯಾಗಿದ್ದು, ಮೃತದೇಹವನ್ನು ನಗರದ ವಿಮ್ಸ್ಗೆ ತರಲಾಗಿದೆ. ಪ್ರಕರಣ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಘಟನಾ ಸ್ಥಳವನ್ನು ಪರಿಶೀಲಿಸಿ, ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಎಸ್ಪಿ ಡಾ.ಚಂದ್ರಗುಪ್ತ, ಡಿವೈಎಸ್ಪಿ ಮುರುಗಣ್ಣನವರ್, ಪಿಎಸ್ಐಗಳಾದ ನಿರಂಜನ, ಚಿದಾನಂದ ಘಟನಾ ಸ್ಥಳಕ್ಕೆ ಆಗಮಿಸಿದ್ದರು.