ನಾಟಕ ಸಂದೇಶ ಸಮಾಜ ನಿರ್ಮಾಣಕ್ಕೆ ಪ್ರೇರಣೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 4
ನಾಟಕಗಳು ಸಮಾಜಕ್ಕೆ ಸಂದೇಶಗಳನ್ನು ಸಾರುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಲಿವೆ. ನಾಟಕ ಕಲೆಗಳು ಹೆಚ್ಚು ಪ್ರದರ್ಶನಗೊಂಡಾಗ ಮಾತ್ರ ರಂಗ ಕಲೆಗಳು ಜೀವಂತವಾಗಿ ಉಳಿಯಲು ಸಾಧ್ಯ ಎಂದು ಪತ್ರಕರ್ತ ಜಿ.ವಿ. ಸುಬ್ಬರಾವ್ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ದುರ್ಗಾದಾಸ ಕಲಾಮಂದಿರದಲ್ಲಿ ಸೃಷ್ಠಿ ಕಲಾ ಬಳಗ ಹಮ್ಮಿಕೊಂಡಿದ್ದ 'ಸೋರುತಿಹುದು ಸಂಬಂಧ' ಎಂಬ ನಾಟಕ ಪ್ರದರ್ಶನದ ಉದ್ಘಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಕಲಾವಿದರಾದ ಡಾ. ಕೆ. ನಾಗರತ್ನಮ್ಮ, ಜಿ.ಎಂ. ಕೊಟ್ರೇಶ್, ಕೆ. ಮಲ್ಲನಗೌಡ, ಜಿ. ಮಲ್ಲಪ್ಪ, ಶಿಕ್ಷಕ ಬಿಎಂಎಸ್ ಮೃತ್ಯುಂಜಯ, ಸ್ಥಳೀಯ ಮುಖಂಡ ರಮೇಶ್ ರಾಯ್ಕರ್ ಉಪಸ್ಥಿತರಿದ್ದರು.
ವೃದ್ಧರ ತಲ್ಲಣಗಳು: ನೀನಾಸಂ ಪದವೀಧರ ಮಹಾಂತೇಶ್ ರಾಮದುರ್ಗ ರಚಿಸಿ, ನಿರ್ದೇಶಿಸಿದ ಸೋರುತಿಹುದು ಸಂಬಂಧ ಎಂಬ ನಾಟಕವನ್ನು ಸೃಷ್ಟಿ ಕಲಾ ಬಳಗದ ಕಲಾವಿದರಾದ ಬಿಸರಹಳ್ಳಿ ರವಿಕುಮಾರ, ಬಿ. ಸರದಾರ್, ಎಲ್. ಉದಯಕುಮಾರ್, ಬಿ. ಯೋಗೇಶ್, ಶಿವುಕುಮಾರ, ಹ್ಯಾಟಿ ಮಂಜುನಾಥ, ಎಲ್. ಪ್ರಶಾಂತ್, ದಾದಾಪೀರ್ ಮನೋಜ್ಞವಾಗಿ ಅಭಿನಯಿಸಿದರು. ಬಿಎಂಎಸ್ ಪ್ರಭು, ಬಿ. ಆನಂದ ಹಿನ್ನೆಲೆ ಗಾಯನ, ಬಿ. ಪ್ರಕಾಶ್ ನಾಟಕಕ್ಕೆ ಸಂಗೀತ ನೀಡಿದ್ದರು.
ವೃದ್ಧರು ಅನುಭವಿಸುವ ಯಾತನೆಗಳು, ದುಡಿಯಲು ಶಕ್ತಿ ಇಲ್ಲದೆ ತಮಗೆ ಬರುವ ಪಿಂಚಣಿ ಹಣಕ್ಕಾಗಿ ಹೆಣಗಾಡುವ ಪ್ರಸಂಗಗಳು, ವೃದ್ಧರೆಲ್ಲರೂ ಒಂದೆಡೆ ಸೇರಿ ತಮ್ಮ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಮೂಲಕ ನಾಟಕ ಸಾಗುತ್ತದೆ. ಪ್ರಸ್ತುತ ದಿನಮಾನಗಳ ನೈಜ ಘಟನೆಗಳನ್ನು ಇಟ್ಟುಕೊಂಡು ನಿರ್ದೇಶಕ ಕಥೆ ರಚಿಸಿದ್ದಾರೆ. ಮನುಷ್ಯ ವೃದ್ಧನಾದ ಮೇಲೆ ಅನುಭವಿಸುವ ವಾಸ್ತವಾಂಶದ ಸತ್ಯ ಘಟನೆಗಳನ್ನು ಎಳೆ ಎಳೆಯಾಗಿ ನಾಟಕದಲ್ಲಿ ನಿರ್ದೇಶಕ ಬಿಚ್ಚಿಟಿದ್ದಾರೆ.
ಪ್ರತಿಯೊಬ್ಬ ತಂದೆ, ತಾಯಿಗಳು ತಮ್ಮ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿ, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಉನ್ನತ ಉದ್ಯೋಗವನ್ನು ಒದಗಿಸಿಕೊಡುತ್ತಾರೆ. ನಂತರ ತಂದೆ, ತಾಯಿಗಳು ವಯಸ್ಸಾದ ಮೇಲೆ ಉತ್ತಮ ಸ್ಥಿತಿಯಲ್ಲಿರುವ ಮಕ್ಕಳು ತಮ್ಮ ತಂದೆ, ತಾಯಿಗಳನ್ನು ನೋಡಿಕೊಳ್ಳುವ ಪರಿ ಯಾವ ರೀತಿಯಲ್ಲಿರುತ್ತದೆ ಎನ್ನವುದನ್ನು ಒಬ್ಬರ ಮನೆಯಲ್ಲಿ ಒಂದೊಂದು ರೀತಿಯ ನಿದರ್ಶನಗಳನ್ನು ತೋರಿಸುವಲ್ಲಿ ನಿರ್ದೇಶಕ ಅತ್ಯಂತ ಜಾಣ್ಮೆಯಿಂದ ಕಥೆ ಹೆಣಿದಿದ್ದಾರೆ.
ಹೆಚ್ಚುತ್ತಿರುವ ತಂತ್ರಜ್ಞಾನ ಮತ್ತು ನಶಿಸುತ್ತಿರುವ ಮಾನವೀಯ ಮೌಲ್ಯಗಳು, ಸಂಬಂಧಗಳನ್ನು ಪ್ರತಿರೂಪವಾಗಿ ಬಳಿಸಿ ಪಾತ್ರದಾರಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವುದು ನಾಟಕದ ವಿಶೇಷ. ತಂದೆ ಸತ್ತಾಗ ಆತನ ಮಗ ಅಮೆರಿಕಾದಲ್ಲಿರುವುದರಿಂದ ಶವಸಂಸ್ಕಾರಕ್ಕೆ ಬರುವುದು ತಡವಾಗುತ್ತದೆ. ಇದ್ದವರು ಶವಸಂಸ್ಕಾರ ಮಾಡಿ ಅದನ್ನು ನಾನು ವಿಡಿಯೋ ಕಾಲಿಂಗ್ ಮೂಲಕ ನೋಡುತ್ತೇನೆ ಎನ್ನುವುದ, ಮಕ್ಕಳ ಪರೀಕ್ಷೆ ಇವೆ ಇನ್ನರೆಡು ದಿನ ಬಿಟ್ಟು ಶವಸಂಸ್ಕಾರ ಮಾಡಿ ಎನ್ನುವ ಮಾತುಗಳು ನೋಡುಗರನ್ನು ಮಮ್ಮಲ ಮರುಗುವಂತೆ ಮಾಡುತ್ತವೆ.