ಭುವನ ವಿಜಯಕ್ಕೆ ಜನ ಜೈ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 4
ಬಳ್ಳಾರಿ ಮಹಾನಗರದ ಜನತೆ ಇದುವರೆಗೆ ನಗರ ಸಾರಿಗೆ ಇಲ್ಲದೇ ಆಟೋರಿಕ್ಷಾ, ಖಾಸಗಿ ಹಾಗೂ ದ್ವಿಚಕ್ರ ವಾಹನಗಳನ್ನು ಆಶ್ರಯಿಸಿದ್ದರು. ಆದರೆ ಇದೀಗ ಭುವನ ವಿಜಯ ನಗರ ಸಾರಿಗೆ ವ್ಯವಸ್ಥೆ ಜನರ ಪ್ರಶಂಸೆಗೆ ಕಾರಣವಾಗಿದೆ.
ನಿರೀಕ್ಷೆಗಿಂತ ಹೆಚ್ಚಿನ ಆದಾಯ ಬರುತ್ತಿರುವ ಹಿನ್ನೆಲೆಯಲ್ಲಿ ನಗರ ಸಾರಿಗೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮೂಲಕ ಭುವನ ವಿಜಯ ಮಾದರಿ ಬಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಮಾಡಲು ಎನ್‌ಕೆಆರ್‌ಟಿಸಿಯು ಚಿಂತನೆ ನಡೆಸುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಜತೆಗೆ, ಸಂಸ್ಥೆಗೆ ಆದಾಯದ ಮೂಲವಾಗುತ್ತಿದೆ.
ಬಳ್ಳಾರಿ ನಗರದಲ್ಲಿ 31 ಭುವನ ವಿಜಯ ನಗರ ಸಾರಿಗೆ ಬಸ್ಸುಗಳಿಂದ ಬರೋಬ್ಬರಿ ರು. 1.30 ಲಕ್ಷ ಆದಾಯ ಬರುತ್ತಿದೆ. ಖರ್ಚು, ವೆಚ್ಚಕ್ಕೆ, ಈ ಆದಾಯ ಸರಿ ಹೊಂದಿದರೂ, ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರತಿ ಕಿ.ಮೀ.ಗೆ ರು. 26.50 ಖರ್ಚಾದರೆ, ಇದೀಗ ಪ್ರತಿ ಕಿ.ಮೀಗೆ ಸರಾಸರಿ ರು. 26 ಆದಾಯ ಬರುತ್ತಿದೆ. ಕೆಲ ರೂಟ್‌ಗಳಲ್ಲಿ ಪ್ರತಿ ಕಿ.ಮೀ.ಗೆ ರು. 43 ಆದಾಯ ಬರುತ್ತದೆ. ಇದೀಗ ದಿನದಿಂದ ದಿನಕ್ಕೆ ಭುವನ ವಿಜಯದ ಬೇಡಿಕೆ ಹೆಚ್ಚಾಗಿರುವುದು ಸಾರಿಗೆ ಸಂಸ್ಥೆಯ ನಿರ್ವಹಣೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಆದಾಯವು ಹೆಚ್ಚಳವಾಗಲಿದೆ.
ಹೆಚ್ಚುತ್ತಿರುವ ಆದಾಯ: ಪ್ರತಿ ಬಸ್ಸಿಗೆ ರು. 26 ಲಕ್ಷದಂತೆ 31 ಬಸ್‌ಗಳು ಈಗಾಗಲೇ ಬಳ್ಳಾರಿ ನಗರದಾದ್ಯಂತ ಸಂಚರಿಸುತ್ತಿವೆ. ಇದರಿಂದಾಗಿ ಆಟೋಗಳ ಬೇಡಿಕೆ ಕಡಿಮೆಯಾಗುತ್ತಿದೆ. ಇನ್ನು ಆಟೋಗಳು ತಮಗಿಷ್ಟ ಬಂದಂತೆ ಹಣ ಪಡೆಯುವುದಕ್ಕೆ ಬ್ರೇಕ್ ಬಿದ್ದಿದೆ. ಕೇವಲ ರು. 3ಗೆ ಭುವನ ವಿಜಯದಲ್ಲಿ ಯಾವುದೇ ಟೆನ್ಷನ್ ಇಲ್ಲದೆ ಪ್ರಯಾಣ ಮಾಡಬಹುದು. ದರದಲ್ಲಿಯೇ ಉಳಿತಾಯ, ಸುಖಕರ, ಸುರಕ್ಷಿತ ಪ್ರಮಾಣವಾಗಿರುವುದರಿಂದ ಎಲ್ಲರೂ ಭುವನ ವಿಜಯದ ಮೊರೆ ಹೋಗುತ್ತಿದ್ದಾರೆ. ಬಳ್ಳಾರಿಯ ವಿಮ್ಸ್‌ನಿಂದ ಹಳೆ ಬಸ್ ನಿಲ್ದಾಣಕ್ಕೆ ಬರಬೇಕೆಂದರೆ ಕೇವಲ ರು. 5 ಬರಬಹುದು. ಆಟೋಕ್ಕಾದರೆ ರು. 30 ರಿಂದ 40 ನೀಡಬೇಕಾಗುತ್ತಿತ್ತು.
ಹೆಚ್ಚುತ್ತಿರುವ ಬೇಡಿಕೆ: ಬಳ್ಳಾರಿ ವಿಭಾಗಕ್ಕೆ ಭುವನ ವಿಜಯ ಮಾದರಿ ಬಸ್‌ಗಳ ಮೂಲಕ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿರುವ ಹಿನ್ನೆಲೆಯಲ್ಲಿ ಪ್ರಶಂಸೆ ಪತ್ರಗಳು ಹರಿದು ಬರುತ್ತಿವೆ. ಅದರೊಂದಿಗೆ ಹೆಚ್ಚಿನ ಬಸ್‌ಗಳನ್ನು ವಿವಿಧ ಪ್ರದೇಶಗಳಿಗೆ ಬಿಡುವ ಬೇಡಿಕೆ ಪತ್ರಗಳು ಬರುತ್ತಿವೆ. ಆದರೆ ಸಿಬ್ಬಂದಿ ಹಾಗೂ ಬಸ್‌ಗಳ ನಿರ್ವಹಣೆಗೆ ಹರಸಾಹಸ ಪಡುವಂತಾಗಿದೆ. ಸಾರಿಗೆ ಸಂಸ್ಥೆಯ ನಿರೀಕ್ಷೆಗಿಂತ ಇದೀಗ ಆದಾಯ ಹೆಚ್ಚುತ್ತಿರುವುದು ಸಾರಿಗೆ ಸಂಸ್ಥೆಗೆ ನಗರ ಸಾರಿಗೆಯನ್ನು ಮತ್ತಷ್ಟು ಹೆಚ್ಚಿಸಲು ಉತ್ಸಾಹ ಬಂದಿದೆ. ಇನ್ನು ಕಿರಿದಾದ ರಸ್ತೆಗಳಲ್ಲಿ ಬಸ್‌ಗಳನ್ನು ಓಡಿಸುವುದು ಕಷ್ಟವಾಗಿರುವುದರಿಂದ ನಗರದ ಕಿರಿದಾದ, ಜನಸಂದಣಿ ಇರುವ ರಸ್ತೆಗಳು ಅಗಲೀಕರಣಗೊಂಡರೆ, ಮತ್ತಷ್ಟು ಬಸ್‌ಗಳು ಹೆಚ್ಚಾಗಿ ಸಂಚರಿಸಲು ಅನುಕೂಲ ಎನ್ನುತ್ತಾರೆ ಸಾರಿಗೆ ಸಂಸ್ಥೆ ಅಧಿಕಾರಿಗಳು.
ಸುಸ್ತಾದ ಆಟೋಗಳು: ಪೆಟ್ರೊಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು, ನಗರ ಸಾರಿಗೆ ಬಸ್‌ಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಟಿಯಲ್ಲಿ ದ್ವಿಚಕ್ರ ವಾಹನ ಬಳಕೆ ಮಾಡುವ ಕೆಲವರು ನಗರ ಸಾರಿಗೆ ಮೊರೆ ಹೋಗುವ ಸಾಧ್ಯತೆ ಇದೆ. ಬಳ್ಳಾರಿ ಮಹಾನಗರ ಪ್ರಮುಖ ರಸ್ತೆಗಳಲ್ಲಿ, ಪ್ರಮುಖ ಪ್ರದೇಶಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 6ರಿಂದಲೇ ತಮ್ಮ ಸಚಾರ ಆರಂಭಿಸಿ, ರಾತ್ರಿ 10ವರೆಗೆ ನಡೆಯುವುದರಿಂದ ಸಹಜವಾಗಿಯೇ ಆಟೋಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಆಟೋದವರು ದುಬಾರಿ ಚಾರ್ಜ್‌ಗೆ ಬೇಡಿಕೆ ಇಡದೆ, ಸಿಕ್ಕಷ್ಟು ಸಾಕು ಎನ್ನುವ ಮಟ್ಟಕೆ ಬಂದಿದ್ದಾರೆ. ಇನ್ನು ನಗರ ಸಾರಿಗೆಯನ್ನು ಮತ್ತಷ್ಟು ಹೆಚ್ಚಿಸಿದರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಶಶಿಧರ ಮೇಟಿ