ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೋಗಗ್ರಸ್ತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು

Mainashree
Updated On : 5 Jun 2013, 11:33 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 4
ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮೂಲ ಸೌಕರ್ಯಗಳ ಕೊರತೆ ಮತ್ತು ಖಾಲಿಯಾದ ಸಿಬ್ಬಂದಿ ವರ್ಗದಿಂದ ಸೊರಗಿದಂತಾಗಿದೆ. ಈ ಕಾಲೇಜಿನತ್ತ ನೂತನ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ವಿದ್ಯಾರ್ಥಿಗಳಿಗೆ ನೆರವಾಗಬೇಕಾಗಿದೆ.
ಹೌದು, ಹೆಸರಿಗೆ ಮಾತ್ರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಆದರೆ ಇಲ್ಲಿ ಏನು ಕೇಳಿದರೂ ಎಲ್ಲವೂ ಖಾಲಿ. ಸುಸಜ್ಜಿತ ಬೋಧನಾ ಕೊಠಡಿ, ಪ್ರಯೋಗಾಲಯ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಕನಿಷ್ಠ ಮೂಲ ಸೌಕರ್ಯಗಳೇ ಮಾಯವಾಗಿವೆ. ಇನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಿಬ್ಬಂದಿಯೇ ಇಲ್ಲ. ಇಂತಹ ನೂರಾರು ಸಮಸ್ಯೆಗಳು ಸುತ್ತಿಕೊಂಡಿರುವ ಕಾಲೇಜು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರ ಸ್ವ ಕ್ಷೇತ್ರದಲ್ಲಿದೆ.
ಡಾ. ನಂಜುಂಡಪ್ಪ ವರದಿಯನ್ವಯ ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದ ಪ್ರದೇಶವೆಂದು ಹಣೆಪಟ್ಟಿ ಹೊತ್ತಿರುವ ಹೂವಿನಹಡಗಲಿಗೆ 2007-08ರಲ್ಲಿ ಅಂದಿನ ಸರ್ಕಾರ ಹೂವಿನಹಡಗಲಿ ಸೇರಿದಂತೆ ರಾಮನಗರ, ಹಾವೇರಿ, ಗಂಗಾವತಿ, ರಾಯಚೂರು ಮತ್ತು ಕಾರವಾರ ನಗರಗಳಿಗೆ ಸರ್ಕಾರಿ ಎಂಜಿನಿಯರಿಂಗ್ ಮಂಜೂರು ಮಾಡಿತ್ತು. ಪ್ರಭಾವಿ ಸಚಿವರುಗಳಿರುವ ಕ್ಷೇತ್ರವಾಗಿದ್ದ ಹಾವೇರಿ ಸೇರಿದಂತೆ ಕೆಲ ಕಾಲೇಜಿನ ನೂತನ ಕಟ್ಟಡ ನಿರ್ಮಾಣವಾಗಿ ಈಗಾಗಲೇ ಉದ್ಘಾಟನೆಯಾಗಿವೆ. ಆದರೆ ಹೂವಿನಹಡಗಲಿ ಕಾಲೇಜಿಗೆ ಸರ್ಕಾರದಿಂದ ಇಷ್ಟು ದಿನಗಳಾದರೂ ಕಟ್ಟಡದ ಭಾಗ್ಯ ಕೂಡಿ ಬಂದಿಲ್ಲ. ಈವರೆಗೂ ಸರ್ಕಾರದ ಅಧೀನದಲ್ಲಿದ್ದ ಕಾಲೇಜನ್ನು ಬೆಳಗಾವಿಯ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಅಧೀನಕ್ಕೆ ಒಳಪಡಿಸಲು ಎಲ್ಲ ವರದಿ ಸಿದ್ಧಗೊಂಡಿದ್ದರೂ ವಿಟಿಯು ಸಮಿತಿ ಈವರೆಗೂ ಕಾಲೇಜಿಗೆ ಭೇಟಿ ನೀಡಿಲ್ಲ ಎಂಬ ಮಾಹಿತಿ ಇದೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಡೆಸಲು ಸೂಕ್ತ ಕಟ್ಟಡವಿಲ್ಲದೆ, ಇಲ್ಲಿನ ಹಳೆ ತಾಲೂಕು ಕಚೇರಿ ಕಟ್ಟಡ, ಸರ್ಕಾರಿ ಐಟಿಐ ಕಾಲೇಜು ಕಟ್ಟಡದಲ್ಲಿ ಆರಂಭಿಸಲಾಗಿತ್ತು. ತಾಲೂಕು ಕಚೇರಿಯಲ್ಲಿ ಹಾಕಿದ ನೆಲಹಾಸು ಕಲ್ಲುಗಳು ಕುಸಿದು ತೆಗ್ಗು ದಿನ್ನೆಗಳಾಗಿದ್ದು, ಕೆಲ ಕೊಠಡಿಗಳಲ್ಲಿ ಕಲ್ಲು ಕಿತ್ತಿವೆ. ಇಂತಹ ಶಿಥಿಲಗೊಂಡ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿದೆ.
ಸಿಬ್ಬಂದಿ ಖಾಲಿ ಖಾಲಿ: ಈ ಎಂಜಿನಿಯರಿಂಗ್ ಕಾಲೇಜಿಗೆ ಸರ್ಕಾರ 153 ಹುದ್ದೆಗಳನ್ನು ಮಂಜೂರು ಮಾಡಿದೆ. ಆದರೆ ಇದರಲ್ಲಿ ಕೆಲಸ ನಿರ್ವಹಿಸುತ್ತಿರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ. 46 ಕಚೇರಿ ಸಿಬ್ಬಂದಿಗಳಲ್ಲಿ ಕೇವಲ 3 ಮಂದಿ ಮಾತ್ರ ಕೆಲಸ ಮಾಡುತ್ತಿದ್ದು, ಉಳಿದ 40 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಸಹಾಯಕ ಅಧಿಕಾರಿ 1, ರಿಜಿಸ್ಟರ್ 2, ಉಪ ಅಧೀಕ್ಷಕರು 3, ಪ್ರಥಮ ದರ್ಜೆ ಗುಮಾಸ್ತ 7, ದ್ವಿ ದರ್ಜೆ ಗುಮಾಸ್ತ 10, ಶೀಘ್ರಲಿಪಿ 1, ಟೈಪಿಸ್ಟ್ 2, ಕಚೇರಿ ಸಹಾಯಕ 2, ಸೇವಕರು 10, ವಾಹನ ಚಾಲಕರು 5 ಸೇರಿದಂತೆ 43 ಹುದ್ದೆಗಳು ಖಾಲಿ ಇವೆ ಎಂದು ಕಾಲೇಜು ಪ್ರಭಾರಿ ಪ್ರಾಚಾರ್ಯ ಡಾ. ಚಿಕ್ಕಣ್ಣ ಮಾಹಿತಿ ನೀಡಿದರು.
ಪ್ರಾಧ್ಯಾಪಕ ಮತ್ತು ಉಪನ್ಯಾಸಕ ಹುದ್ದೆಗಳು ಖಾಲಿ ಇರುವುದು ಮತ್ತೊಂದು ಸೋಜಿಗ. ಕಾಲೇಜಿಗೆ ಪ್ರಾಚಾರ್ಯರ ಹುದ್ದೆಯೇ ಖಾಲಿ ಇದೆ. 5 ಪ್ರಾಧ್ಯಾಪಕರ ಹುದ್ದೆ ಖಾಲಿಯಾಗಿದ್ದು, ವಿವಿಧ ವಿಭಾಗಗಳಿಗೆ ಉಪನ್ಯಾಸಕರು ಇಲ್ಲದೇ ಅತಿಥಿ ಉಪನ್ಯಾಸಕರಿಂದ ಪಾಠ ನಡೆಸಲಾಗುತ್ತಿದೆ.
ಸಿವಿಲ್ ವಿಭಾಗ: ಸಿವಿಲ್ ವಿಭಾಗದಲ್ಲಿ ಬೋಧಕ ಸಿಬ್ಬಂದಿ 16 ಹುದ್ದೆಗಳಲ್ಲಿ ಕೇವಲ ಮೂವರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಬೋಧಕೇತರ 19 ಸ್ಥಾನಗಳು ಖಾಲಿ ಇವೆ. ಮೆಕ್ಯಾನಿಕಲ್ ವಿಭಾಗದ 15 ಬೋಧಕ ಸಿಬ್ಬಂದಿಗಳಲ್ಲಿ 9 ಮಂದಿ ಮಾತ್ರ ಕೆಲಸ ಮಾಡುತ್ತಿದ್ದರೆ, 20 ಬೋಧಕೇತರ ಸಿಬ್ಬಂದಿಗಳಲ್ಲಿ ಕೇವಲ ಇಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ 14 ಬೋಧಕ ಸಿಬ್ಬಂದಿಗಳಲ್ಲಿ 5 ಸ್ಥಾನಗಳು ಭರ್ತಿ ಇವೆ. ಇನ್ನು 8 ಬೋಧಕೇತರ ಸ್ಥಾನಗಳು ಸಂಪೂರ್ಣ ಖಾಲಿ. ಕಂಪ್ಯೂಟರ್ ಸೈನ್ಸ್ ವಿಭಾಗದ 7 ಹುದ್ದೆಗಳಲ್ಲಿ ಮೂವರು ಕೆಲಸ ನಿರ್ವಹಿಸುತ್ತಿದ್ದಾರೆ, 7 ಬೋಧಕೇತರ ಸ್ಥಾನಗಳು ಖಾಲಿ ಇವೆ.
ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಆದಷ್ಟು ಬೇಗ ಇತ್ತ ಗಮನ ಹರಿಸಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಿ ನೂತನ ಕಟ್ಟಡಕ್ಕೆ ಚಾಲನೆ ನೀಡುವರೇ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement