ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ
ಹಗರಿಬೊಮ್ಮನಹಳ್ಳಿ: ದುಬಾರಿ ಬೆಲೆಯ ಬಿತ್ತನೆ ಬೀಜದಿಂದ ರೈತರನ್ನು ಕಾಪಾಡಲು ರೈತ ಸಂಪರ್ಕ ಕೇಂದ್ರಗಳ ಮೂಲಕ ರಾಜ್ಯ ಸರ್ಕಾರ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಸುತ್ತಿದೆ. ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಇಳುವರಿ ಪಡೆಯುವ ಮೂಲಕ ಕೃಷಿ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವಂತೆ ಶಾಸಕ ಎಸ್. ಭೀಮಾನಾಯ್ಕ್ ರೈತರಿಗೆ ಕಿವಿಮಾತು ಹೇಳಿದರು.
ಪಟ್ಟಣದ ರಾಮನಗರದ ಶ್ರೀಮಾರುತಿ ರಸ್ತೆಯಲ್ಲಿನ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ರೈತರಿಗೆ ಬಿತ್ತನೆ ಬೀಜ ಹಾಗೂ ಪರಿಹಾರಧನ ವಿತರಿಸಿ ಮಾತನಾಡಿ, ಐದು ಎಕರೆ ಭೂಮಿ ಹೊಂದಿರುವ ಎಲ್ಲ ರೈತರಿಗೂ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಇರುವ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ಕ್ಷೇತ್ರದ ಎಲ್ಲ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬೀಜ ಖರೀದಿಸಲು ತಿಳಿಸಿದರು.
ರೈತರಿಗೆ ಸರ್ಕಾರದ ರಿಯಾಯ್ತಿ ದರದ ಬಿತ್ತನೆ ಬೀಜ ಹಾಗೂ ಪರಿಹಾರ ಧನದ ಚೆಕ್ನ್ನು ವಿತರಿಸಿದರು. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಕಡ್ಲಬಾಳು ಗ್ರಾಪಂ ಅಧ್ಯಕ್ಷ ಕೊಟ್ರಗೌಡ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಸಿನಿಮಾ ಮಂಜಣ್ಣ, ತಾಲೂಕಾಧ್ಯಕ್ಷ ಹನಸಿ ದೇವರಾಜ, ತಹಸೀಲ್ದಾರ್ ನಾಗರಾಜ ಭಟ್, ತಾಪಂ ಇಓ ಜಿ. ಗೋಪ್ಯಾನಾಯ್ಕ, ಸಹಾಯಕ ಕೃಷಿ ನಿರ್ದೇಶಕ ರಮೇಶನಾಯ್ಕ ಇದ್ದರು.