ಸುದ್ದಿ ಸಂಕ್ಷೇಪ
ಇಂದು ವಿಶ್ವ ಪರಿಸರ ದಿನಾಚರಣೆ
ಹೊಸಪೇಟೆ: ಎಂಎಸ್ಪಿಎಲ್ ಸಂಸ್ಥೆಯವರು ಜೂ. 5ರಂದು ತಾಲೂಕಿನ ವ್ಯಾಸನಕೆರೆ ಮೈನ್ಸ್ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆ ಆಯೋಜಿಸಿದ್ದಾರೆ. ಬಳ್ಳಾರಿ ಗಣಿ ಸುರಕ್ಷತಾ ನಿರ್ದೇಶಕ ವಿ. ಲಕ್ಷ್ಮೀನಾರಾಯಣ, ಹೊಸಪೇಟೆ ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಟಿ.ಎಚ್. ಶಿವಣ್ಣ, ಬಳ್ಳಾರಿ ಪರಿಸರ ಸಂರಕ್ಷಣಾಧಿಕಾರಿ ಬಿ.ಎಸ್. ಗೋಪಾಲಕೃಷ್ಣ, ಹೊಸಪೇಟೆ ಅರಣ್ಯ ಇಲಾಖೆ ಅಧಿಕಾರಿ ಶ್ರೀಧರ ಭಾಗವಹಿಸುವರು. ನಗರದ ನೆಹರು ಕಾಲೋನಿ ಮತ್ತು ಎಂ.ಜೆ ನಗರ ಪ್ರದೇಶದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ.
ಕಾರು ಡಿಕ್ಕಿ: ಬೈಕ್ ಸವಾರ ಸಾವು
ಕೊಟ್ಟೂರು: ಚಲಿಸುತ್ತಿದ್ದ ಕಾರೊಂದರ ಗಾಲಿ ಹಠಾತ್ತನೆ ಸ್ಫೋಟಗೊಂಡು ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ಇತರ ಇಬ್ಬರು ಯುವಕರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪ ಮಂಗಳವಾರ ಸಂಜೆ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟವರನ್ನು ಮೈದೂರು ಸಿದ್ದೇಶ್ (30) ಎಂದು ಗುರುತಿಸಲಾಗಿದೆ. ಅವರೊಂದಿಗೆ ಬೈಕ್ನಲ್ಲಿದ್ದ ಎಚ್.ಜಿ. ಪ್ರಕಾಶ್, ಕೆಳಗೇರಿ ಉಮೇಶ್ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗುರುರಾಜ ಮೈಲಾರ ಭೇಟಿ ನೀಡಿದ್ದಾರೆ. ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ನಾಪತ್ತೆಯಾಗಿದ್ದಾನೆ.
ಈಜಲು ಹೋಗಿ ಬಾಲಕ ಸಾವು
ಹೊಸಪೇಟೆ: ಸ್ನಾನಕ್ಕೆಂದು ಹೋಗಿ ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದಲ್ಲಿ ಸೋಮವಾರ ನಡೆದಿದೆ. ಮೃತ ಬಾಲಕನನ್ನು ಮರಿಯಮ್ಮನಹಳ್ಳಿ ತಾಂಡದ ನಿವಾಸಿ ಅಕ್ಷಯ ನಾಯ್ಕ (12) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಕುರಿ ಮೇಯಿಸಲೆಂದು ಅಡಿವಿಗೆ ಹೋದಾಗ, ಅಡವಿಯಲ್ಲಿದ್ದ ಚೆಕ್ ಡ್ಯಾಂನಲ್ಲಿ ಈಜಲು ನೀರಿಗೆ ಇಳಿದಿದ್ದಾನೆ. ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.