ಹುಲಿಗೆಮ್ಮ ದೇವಿ ಜಾತ್ರೆ: ದರ್ಶನ ಪಡೆದ 2 ಲಕ್ಷ ಭಕ್ತರು
ಮನಿರಾಬಾದ್: ಹುಲಿಗೆಮ್ಮ ದೇವಿ ಜಾತ್ರೆಯ 3ನೇ ದಿನವಾದ ಮಂಗಳವಾರ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಹುಲಿಗೆಮ್ಮ ದೇವಿಯ ದರ್ಶನ ಪಡೆದರು.
ಭಾನುವಾರ ಮಹಾರಥೋತ್ಸವದಲ್ಲಿ 1 ಲಕ್ಷ ಭಕ್ತರು ಭಾಗವಹಿಸಿದ್ದರು. ಸೋಮವಾರವೂ ದೇವಸ್ಥಾನಕ್ಕೆ 1 ಲಕ್ಷ ಭಕ್ತರು ಆಗಮಿಸಿದ್ದರು. ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳು ಶ್ರೀದೇವಿಗೆ ವಿಶೇಷ ದಿನಗಳಾಗಿದ್ದು, ಜಾತ್ರೆಯ ನಡೆಯುವಾಗ ಮಂಗಳವಾರ ಅಥವಾ ಶುಕ್ರವಾರ ಬಂದರೆ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಜಾತ್ರೆಯ 3ನೇ ದಿನ ಮಂಗಳವಾರ ಬಂದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ಹುಲಿಗೆಮ್ಮ ದೇವಿಯ ದರ್ಶನ ಪಡೆದರು ಎಂದು ದೇವಸ್ಥಾನದ ಸಮಿತಿ ಸದಸ್ಯರಾದ ವಿಜಯಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
11 ಸಿಸಿ ಟಿವಿ: ದೇವಸ್ಥಾನದ ಆವರಣದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸುಮಾರು 11 ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮರಾಗಳನ್ನು (ಸಿಸಿ ಟಿವಿ) ಅಳವಡಿಸಲಾಗಿದೆ. ಆರತಿ ತಟ್ಟೆಯ ಹಣವನ್ನು ನೇರವಾಗಿ ಹುಂಡಿಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಆವರಣದಲ್ಲಿ ಶಾಶ್ವತವಾಗಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ದೇವಸ್ಥಾನಕ್ಕೆ ಬರುವ ಆದಾಯದಲ್ಲಿ ಏರಿಕೆಯಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಮೌಳಿ ತಿಳಿಸಿದ್ದಾರೆ.
ಆಹಾರ ಧಾನ್ಯ ಟೆಂಡರ್ ರದ್ದು: ಹಿಂದೆ ಆಹಾರ ಧಾನ್ಯಕ್ಕಾಗಿ ಟೆಂಡರ್ ಕರೆಯುವ ಪದ್ಧತಿ ಇತ್ತು. ಇದರಿಂದ ಭಕ್ತರಿಗೆ ತುಂಬ ಅನಾನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಟೆಂಡರ್ ಅನ್ನು ರದ್ದುಗೊಳಿಸಲಾಗಿದ್ದು, ಇನ್ಮುಂದೆ ಭಕ್ತರು ಆಹಾರ ಧಾನ್ಯವನ್ನು ನೇರವಾಗಿ ದೇವಸ್ಥಾನಕ್ಕೆ ನೀಡಿ ರಸೀದಿಯನ್ನು ಪಡೆಯಬಹು ಎಂದು ಚಂದ್ರಮೌಳಿ ತಿಳಿಸಿದರು.