ಕೃಷಿ ಕಡೆಗಣಿಸಿದರೆ ದೇಶಕ್ಕೆ ಗಂಡಾಂತರ
ಕೂಡ್ಲಿಗಿ: ಇತ್ತೀಚಿನ ದಿನಗಳಲ್ಲಿ ಕೃಷಿ ಅವಲಂಬಿತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತದೆ. ಕೃಷಿಯನ್ನು ಕಡೆಗಣಿಸಿದರೆ ತಿನ್ನಲು ಅನ್ನಕ್ಕೆ ಪರದಾಡುವ ಸ್ಥಿತಿ ಬರುತ್ತದೆ. ಇದರಿಂದ ದೇಶಕ್ಕೆ ಗಂಡಾಂತರ ಒದಗಿ, ಡೋಲಾಯಮಾನ ಸ್ಥಿತಿಗೆ ತಲುಪುತ್ತದೆ ಎಂದು ಸಾವಯವ ಕೃಷಿಕ ಎಚ್.ವಿ. ಸಜ್ಜನ್ ಎಚ್ಚರಿಸಿದರು.
ಅವರು ಬುಧವಾರ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ನಡೆದ ಎನ್ನೆಸ್ಸೆಸ್ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಕೃಷಿಕರು ಹೆಚ್ಚಾಗಿ ಇತ್ತೀಚಿಗೆ ಗ್ರಾಮಗಳನ್ನು ತೊರೆದು ನಗರವಾಸಿಗಳಾಗುತ್ತಿದ್ದಾರೆ. ಇದರಿಂದ ಕೃಷಿಗೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಆಹಾರ ಧಾನ್ಯಗಳ ಉತ್ಪಾದನೆ ಇಳಿಮುಖವಾಗುತ್ತದೆ. ಅಂತಿಮವಾಗಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ಬೆಟ್ಟ ಗುಡ್ಡಗಳಲ್ಲಿ ಅನೇಕ ಜೀವ ವೈವಿಧ್ಯತೆಯಿಂದ ಕೂಡಿದ ಸಸ್ಯ ಪ್ರಭೇದಗಳಿವೆ. ಇದರಿಂದ ಬಯಲು ಸೀಮೆಯಲ್ಲಿ ಉತ್ತಮ ಪರಿಸರ ಸಿಕ್ಕಂತಾಗಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಸಾಯನಿಕ ಕೃಷಿ ಪದ್ಧತಿಯಿಂದ ಮಣ್ಣಿನ ಫಲವತ್ತತೆ ಹಾಳಾಗುವುದಲ್ಲದೆ, ಹೆಚ್ಚಿನ ಲಾಭಗಳಿಸಲು ಸಾಧ್ಯವಿಲ್ಲ. ಸಾವಯವ ಕೃಷಿ ಆಧಾರಿತ ತೋಟಗಾರಿಕೆ ಬೆಳೆ ಅಧಿಕ ಲಾಭದೊಂದಿಗೆ ರೈತರ ಬದುಕು ಹಸನಾಗುವುದು ಎಂದು ತಿಳಿಸಿದರು.
ಖುಷ್ಕಿ ಜಮೀನಿನಲ್ಲಿ ಮರ ಆಧಾರಿತ ಕೃಷಿ ಹೆಚ್ಚಿನ ಆದಾಯಕ್ಕೆ ಅನುಕೂಲ. ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ಪ್ರತಿಯೊಂದು ಮರ ಆಧಾರಿತ ಕೃಷಿ ಪದ್ಧತಿ ಅಳವಡಿಸಿಕೊಂಡು, ರೈತರು ಸಾಕಷ್ಟು ಆದಾಯಗಳಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪಪಂ ಸದಸ್ಯ ರಜನಿಕಾಂತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ನಾಗರಾಜ, ಪಪಂ ಸದಸ್ಯ ದೊಡ್ಡ ಚಿತ್ತಪ್ಪರ ಸಣ್ಣಯ್ಯ, ಹೂಡೆಂ ಕೃಷ್ಣಮೂರ್ತಿ, ಬಿ. ನಾಗರಾಜ, ಪ್ರಾಚಾರ್ಯ ಜಿ.ಟಿ. ಶಿವಾನಂದಪ್ಪ, ಜಿಲಾನ್, ಯಜಮಾನ ಚಿತ್ತಪ್ಪ, ಪೂಜಾರಿ ಈರಪ್ಪ, ದೊಡ್ಡ ಮೂಕಪ್ಪ, ಆಡಳಿತ ಮಂಡಳಿ ಅಧ್ಯಕ್ಷೆ ಚಂದ್ರಿಕಾಬಾಯಿ ಮುಂತಾದವರು ಇದ್ದರು. ಆಯಿಷಾ ಪ್ರಾರ್ಥಿಸಿದರು, ಉಪನ್ಯಾಸಕ ತಳವಾರ ಉಮೇಶ್ ಸ್ವಾಗತಿಸಿದರು, ಸುಷ್ಮಲತಾ ನಿರೂಪಿಸಿದರು, ಯೋಗರಾಜ್ ವಂದಿಸಿದರು. ಇದೇ ಸಂದರ್ಭದಲ್ಲಿ ಬಿಇಡಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.