ಬಳ್ಳಾರಿಯಲ್ಲಿ ಉತ್ತಮ ಮಳೆ
ಬಳ್ಳಾರಿ: ಉರಿ ಬಿಸಿಲಿನ ತಾಪದಿಂದ ಕಂಗಾಲಾಗಿ ಬಸವಳಿದ ಬಳ್ಳಾರಿ ಜನರಿಗೆ ಗುರುವಾರ ರಾತ್ರಿ ಮೂರು ತಾಸುಗಳಿಗೂ ಹೆಚ್ಚು ಕಾಲ ಸುರಿದ ಮಳೆ ತಂಪು ಎರೆದಿದೆ. ಬಳ್ಳಾರಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದ ಹಲವೆಡೆಗಳಲ್ಲಿ ಗುರುವಾರ ರಾತ್ರಿ 69 ಮಿ.ಮೀ.ನಷ್ಟು ಮಳೆಯಾಗಿದೆ. ಬಿರು ಬಿಸಿಲಿನ ತಾಪಕ್ಕೆ ತತ್ತರಿಸಿ, ಮಳೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಖುಷಿಯಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳ ಇಕ್ಕೆಲಗಳಲ್ಲಿನ ಚರಂಡಿಗಳು ತುಂಬಿ ನೀರೆಲ್ಲ ರಸ್ತೆ ಮೇಲೆ ಹರಿಯುವಂತಾಯಿತು. ಇನ್ನು ನಗರದ ದುರ್ಗಮ್ಮ ದೇವಸ್ಥಾನದ ಬಳಿಯ ಕೆಳ ಸೇತುವೆ, ಎಸ್.ಎನ್. ಪೇಟೆ, ರಂಗಮಂದಿರದ ಅಂಡರ್ ಬ್ರಿಡ್ಜ್ಗಳೆಲ್ಲ ಮಳೆ ನೀರಿನಿಂದ ತುಂಬಿ ಹೋಗಿದ್ದರಿಂದ ಜನರ ಸಂಚಾರಕ್ಕೆ ತೊಂದರೆ ಉಂಟಾಗಿ, ಪರ್ಯಾಯ ರಸ್ತೆ ಹುಡುಕುವಂತೆ ಮಾಡಿತ್ತು. ನಗರದ ರೇಡಿಯೋ ಪಾರ್ಕ್ನಲ್ಲಿರುವ ಸರ್ಕಾರಿ ಪ್ರೌಢಶಾಲೆ ಹಾಗೂ ಇತರ ಶಾಲಾ ಕಾಲೇಜುಗಳ ಆವರಣದಲ್ಲೆಲ್ಲ ಮಳೆಯಿಂದ ನೀರು ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಓಡಾಡಲು ಅಡಚಣೆ ಉಂಟಾಗಿತ್ತು. ಇನ್ನು ಹಳೆ ಬಸ್ ನಿಲ್ದಾಣ ಮತ್ತು ಹೊಸ ಬಸ್ ನಿಲ್ದಾಣಗಳಲ್ಲಿ ಮಳೆಯಿಂದ ನೀರು ನಿಂತು ಕೆರೆಯಾಗಿ ಮಾರ್ಪಟ್ಟಿತ್ತು. ರಾತ್ರಿ ಸುಮಾರು 9 ಗಂಟೆ ಬಳಿಕ ವಿದ್ಯುತ್ ಕಡಿತಗೊಳಿಸಲಾಗಿತ್ತು. ಜೂ. 6 ಮತ್ತು 7ರಂದು ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ನಗರದ ಜನತೆ ತಂಪು ಅನುಭವಿಸಿದ್ದರೆ, ಗ್ರಾಮಾಂತರ ಪ್ರದೇಶಗಳ ರೈತಾಪಿ ವರ್ಗದಲ್ಲಿ ಕೊಂಚ ನೆಮ್ಮದಿ ಮೂಡಿದೆ.