ಮೂಲಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿಗೆ ಮನವಿ
ಬಳ್ಳಾರಿ: ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮುಂಡ್ರಿಗಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಯುಸಿಐ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಗರದಿಂದ ಕೂಗಳತೆ ದೂರದಲ್ಲಿರುವ ಮುಂಡ್ರಿಗಿ ಗ್ರಾಮ ಸಮಸ್ಯೆಗಳ ಸಾಗರವನ್ನೇ ಹೊತ್ತಿದ್ದು, ಇತ್ಯರ್ಥಪಡಿಸಬೇಕಿದ್ದ ಜನಪ್ರತಿನಿಧಿ, ಸರ್ಕಾರಿ ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. ಮೊದಲೇ ರಸ್ತೆ, ಚರಂಡಿ ಇಲ್ಲದ ಗ್ರಾಮಕ್ಕೆ ಒಮ್ಮೆ ಮಳೆ ಬಂದರೆ ಪರಿಸ್ಥಿತಿ ಹೇಳತೀರದು. ಟಾರ್ ಅಥವಾ ಕಾಂಕ್ರೀಟ್ ಕಾಣದ ಇಲ್ಲಿನ ರಸ್ತೆಗಳಲ್ಲಿ ಜಲ್ಲಿಕಲ್ಲುಗಳು ಎದ್ದು ನಿಂತಿದ್ದು, ರಾತ್ರಿ ಹೊತ್ತಲ್ಲಿ ಮಕ್ಕಳು, ವೃದ್ಧರು ಸಂಚರಿಸಲು ತೊಂದರೆಪಡುವಂತಾಗಿ ರೋಗಗಳ ಆಹ್ವಾನ ತಾಣಗಳಾಗಿ ಮಾರ್ಪಾಡಾಗಿದೆ ಎಂದು ಸಂಘಟನೆಯ ಎ. ದೇವದಾಸ್ ಆರೋಪಿಸಿದರು.
ಹೀಗಾಗಿ ಕೂಡಲೇ ಗ್ರಾಮದಲ್ಲಿನ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮುಂಡ್ರಿಗಿಯ ಆಶ್ರಯ ಕಾಲನಿಯಚರಂಡಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು. ರಸ್ತೆಯಲ್ಲಿ ಮಳೆನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಮುಂಡ್ರಿಗಿಯ ಎಲ್ಲ ಭಾಗಗಳಿಗೆ ಒಳ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.
ಎಸ್‌ಯುಸಿಐ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿಸ್ವಾಸ್, ಮುಂಡ್ರಿಗಿ ಅಭಿವೃದ್ಧಿಗಾಗಿ ರು. 50 ಕೋಟಿ ಬಿಡುಗಡೆ ಮಾಡಲಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಸಮಿತಿ ಸದಸ್ಯರಾದ ಡಾ. ಪ್ರಮೋದ್, ಗಂಗಣ್ಣ, ಎರ್ರಿಸ್ವಾಮಿ, ಹುಸೇನ್‌ಪೀರ್, ವೀರೇಶ್, ನಾಗರಾಜ, ಮುಂಡ್ರಿಗಿ ಗ್ರಾಮದ ಮಹಿಳೆಯರು ಇದ್ದರು.