ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವರವಾಗುವಳೇ ತುಂಗಭದ್ರೆ?

Mainashree
Updated On : 9 Jun 2013, 11:51 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 8
ತಾಲೂಕಿನಲ್ಲಿ ಕುಡಿವ ನೀರಿಗೆ ಅಂತರ್ಜಲವೇ ಆಶ್ರಯ. ಈ ನೀರಿನಲ್ಲೂ ಫ್ಲೋರೈಡ್ ಅಂಶವಿದ್ದು, ಈ ನೀರನ್ನೇ ಕುಡಿಯಬೇಕಾದ ದುಸ್ಥಿತಿ ಇಲ್ಲಿಯ ಜನತೆಯದ್ದಾಗಿದೆ. ಈಗ ತುಂಗಭದ್ರಾ ಹಿನ್ನೀರಿನಿಂದ ರು. 260 ಕೋಟಿ ವೆಚ್ಚದಲ್ಲಿ ಕೂಡ್ಲಿಗಿ ಕ್ಷೇತ್ರದ 217 ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಪೂರೈಸುವ 2 ಹಂತದ ಯೋಜನೆಗೆ ನೀಲ ನಕ್ಷೆ ಸಿದ್ಧವಾಗಿದೆ.
ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳಿಗೆ ಮಾತ್ರ ತುಂಗಭದ್ರಾ ಹಿನ್ನೀರಿನಿಂದ ಕುಡಿವ ನೀರನ್ನು ಪೂರೈಸಲಾಗುತ್ತಿದೆ. ಆದರೆ, ತಾಲೂಕಿನ ಇನ್ನಿತರ ನೂರಾರು ಹಳ್ಳಿಗಳಗೆ ಶುದ್ಧ ಕುಡಿವ ನೀರು ಪೂರೈಕೆ ಇಲ್ಲ.
ಶುದ್ಧ ನೀರು ಸಿಗದಿದ್ದರಿಂದ ಕಾಲರಾ, ವಾಂತಿ, ಭೇದಿ ಮುಂತಾದ ಸಾಂಕ್ರಾಮಿಕ ರೋಗಕ್ಕೆ ಪ್ರತಿವರ್ಷ ಐದಾರು ಜನ ಬಲಿಯಾಗುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ನರಸಿಂಹಗಿರಿಯ ಮಹಿಳೆಯೋರ್ವಳು ವಾಂತಿ-ಭೇದಿಯಿಂದ ಸಾವನ್ನಪ್ಪಿದ್ದು, ಇನ್ನು ಪೂಜಾರಹಳ್ಳಿ, ಕುಪ್ಪಿನಕೆರೆ ಸುತ್ತಮುತ್ತಲ ಹಳ್ಳಿಗಳಲ್ಲಿ 35ಕ್ಕೂ ಹೆಚ್ಚು ಜನತೆಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಕಳೆದ ವಾರ ಅಮರದೇವರಗುಡ್ಡ, ಗೊಲ್ಲರಹಟ್ಟಿ ಹಾಗೂ ತಾಂಡಾಗಳಲ್ಲಿ ನೂರಾರು ಜನತೆಗೆ ಶಂಕಿತ ಡೆಂಘೀ ಜ್ವರ ವ್ಯಾಪಿಸಿದಾಗ ಬಾಲಕಿಯೊಬ್ಬಳು ಬಲಿಯಾದಳು. ಶುದ್ಧ ಕುಡಿವ ನೀರಿಲ್ಲದೇ ಜನತೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದಾರೆ. ತಾಲೂಕಿನ ನಾಗರಹುಣಿಸೆ, ಜರ್ಮಲಿ, ಅಡವಿಸೂರವ್ವನಹಳ್ಳಿ, ಜಂಗಮಸೋವೇನಹಳ್ಳಿ ಮುಂತಾದ ಹತ್ತು ಹಲವು ಹಳ್ಳಿಗಳಲ್ಲಿಯ ಕುಡಿವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಈ ಗ್ರಾಮಗಳಲ್ಲಿ 25 ವರ್ಷದವರೂ ಮುದುಕರಾಗಿ ಕಾಣುತ್ತಾರೆ. 1.5ರಷ್ಟು ನೀರಿನಲ್ಲಿ ಫ್ಲೋರೈಡ್ ಅಂಶವಿದ್ದರೆ ಪರವಾಗಿಲ್ಲ. ಆದರೆ, ನಾಗರಹುಣಿಸೆ ಗ್ರಾಮದಲ್ಲಿ 2.79ರಷ್ಟು ಫ್ಲೋರೈಡ್ ಅಂಶವಿದೆ. ಅಡವಿಸೂರವ್ವನಹಳ್ಳಿ ಗ್ರಾಮದಲ್ಲಿ 4.23ರಷ್ಟು ಫ್ಲೋರೈಡ್ ಅಂಶವಿದ್ದು ಕುಡಿವ ನೀರೇ ಇಲ್ಲಿ ವಿಷವಾಗಿದೆ. ತಾಲೂಕಿನ ಬಹುತೇಕ ಹಳ್ಳಿಗಳ ಜನತೆಗೂ ಇದೇ ಗತಿಯಾಗಿದೆ.
ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಶುದ್ಧ ಕುಡಿವ ನೀರಿನ ಈ ಯೋಜನೆ ಜಾರಿಗೆ ಶ್ರಮಿಸಿದ್ದು ಈಗ ಕಾರ್ಯರೂಪಕ್ಕೆ ಬರುತ್ತಿದೆ. ಶಾಸಕರು ಮತ್ತಷ್ಟು ಇಚ್ಛಾಶಕ್ತಿ ತೋರಿದರೆ, ಇನ್ನು ಮೂರೇ ವರ್ಷಗಳಲ್ಲಿ ಕೂಡ್ಲಿಗಿ ತಾಲೂಕಿನ ಹಳ್ಳಿಗಳ ಜನತೆ ಶುದ್ಧ ಕುಡಿವ ನೀರು ಪಡೆಯುವುದರಲ್ಲಿ ಸಂಶಯವಿಲ್ಲ.
ರು. 130 ಕೋಟಿ ಮಂಜೂರು
ಯೋಜನೆಗೆ ಅಗತ್ಯ ಹಣವೂ ಮಂಜೂರಾಗಿದ್ದು, 3-4 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಮೊದಲ ಹಂತದಲ್ಲಿ ರು. 130 ಕೋಟಿ ಮಂಜೂರಾಗಿದ್ದು, ಎರಡನೇ ಹಂತದಲ್ಲಿ ರು. 129.6 ಕೋಟಿ ಬಿಡುಗಡೆಯಾಗಲಿದೆ. ಕೂಡ್ಲಿಗಿ ತಾಲೂಕಿನ 33 ಗ್ರಾಮ ಪಂಚಾಯಿತಿ ಹಳ್ಳಿಗಳಿಗೂ ಈ ನೀರು ಪೂರೈಕೆಯಾಗುತ್ತಿದೆ.
-ವೀರಪ್ಪ, ಎಇಇ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಕೂಡ್ಲಿಗಿ
ಎಲ್ಲಿಂದ ಎಲ್ಲಿಗೆ  ತುಂಗಭದ್ರಾ ಹಿನ್ನೀರು?
ತುಂಗಭದ್ರಾ ನದಿಯ ಹಿನ್ನೀರಿನಿಂದ 47 ಕಿ.ಮೀ. ವ್ಯಾಪ್ತಿ ಉದ್ದ ಪೈಪ್ ಲೈನ್ ಮೊದಲು ನಿರ್ಮಾಣ. ಕೈವಲ್ಯಾಪುರ, ಶಿವಪುರ ಗ್ರಾಮಗಳ ಮಧ್ಯೆ ಇರುವ ಅಯ್ಯನಗುಡ್ಡಕ್ಕೆ ಮೊದಲು ನೀರು ಬರುತ್ತದೆ. ಅಲ್ಲಿ 8 ಎಕರೆ ಜಮೀನು ಖರೀದಿಸಿ ಅಲ್ಲಿಗೆ ಬಂದ ನೀರನ್ನು ರು. 10 ಕೋಟಿ ವೆಚ್ಚದಲ್ಲಿ ಶುದ್ಧೀಕರಿಸಿ ಅಲ್ಲಿಂದ ಕೂಡ್ಲಿಗಿ ಕ್ಷೇತ್ರದ 217 ಹಳ್ಳಿಗಳಿಗೆ ಪೂರೈಕೆ. ಈ ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದ್ದು, ಅವರ ಪ್ರಕಾರ ಎಸ್ಟಿಮೇಟ್ ತಿದ್ದುಪಡಿ ಮಾಡಿ ಅನುಮೋದನೆ ಪಡೆದ ಅನಂತರ ಟೆಂಡರ್ ಕರೆಯುವುದಷ್ಟೇ ಬಾಕಿ ಇದೆ.
- ವೀರಬಾಬು, ಜಿಪಂ ಇಲಾಖೆಯ
ಕಿರಿಯ ಅಭಿಯಂತ, ಕೂಡ್ಲಿಗಿ
ಯೋಜನೆಗೆ ಗ್ರೀನ್ ಸಿಗ್ನಲ್
ಉಜ್ಜಿನಿ ಹಾಗೂ 216 ಹಳ್ಳಿಗಳಿಗೆ ಶುದ್ಧ ನೀರು ಪೂರೈಸುವ ರು. 260 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುಮತಿ ನೀಡಿದೆ. ಎರಡು ಹಂತಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಬ್ಲೂಪ್ರಿಂಟ್, ಸರ್ವೇ ಕಾರ್ಯ ಸಹ ಮುಗಿದಿದೆ. 2010ರಲ್ಲಿಯೇ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇತ್ತೀಚೆಗೆ ಚುನಾವಣೆ ಬಂದಿದ್ದರಿಂದ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈಗ ಪುನಃ ಯೋಜನೆಗೆ ಚಾಲನೆ ದೊರೆಯಲಿದೆ.
- ಬಿ. ನಾಗೇಂದ್ರ, ಶಾಸಕರು, ಕೂಡ್ಲಿಗಿ

ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement