6 ಅಂತರ್ ರಾಜ್ಯ ಕಳ್ಳರ ಬಂಧನ
ಹೊಸಪೇಟೆ: ಇಲ್ಲಿನ ನಗರ ಠಾಣೆಯ ಪೊಲೀಸರು 6 ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ 30 ಸಾವಿರ ಮೌಲ್ಯದ 39 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಕಳೆದ ತಿಂಗಳು 24ರಂದು ನಗರದ ಬಸ್ ನಿಲ್ದಾಣದಲ್ಲಿ ಕೊಪ್ಪಳ ಮೂಲದ ಅನಿಲ್ ಕುಮಾರ್ ಎಂಬುವರ ಪತ್ನಿ ಅಶ್ವಿನಿ ಎಂಬುವರು ದಾವಣಗೆರೆಗೆ ಹೋಗಿ ವಾಪಸು ಬರುವಾಗ ಸ್ಥಳೀಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅವರ ಬ್ಯಾಗ್ನಿಂದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಅನಿಲ್ಕುಮಾರ್ ಮೇ 29ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶನಿವಾರ ನಗರದ ಹಳೇ ಮೇದಾರ ರಸ್ತೆಯಲ್ಲಿ ಕಳ್ಳತನ ಮಾಡಲಾದ ಬಂಗಾರದ ಆಭರಣಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದಾಗ ಬಿಹಾರ ರಾಜ್ಯದ ಮೂಲದ ನಿರಂಜನ ಮಂಡಲ, ಅಜಯ್ಕುಮಾರ್ ಅಂಜನ, ಭಂ.ಭಂ. ಕುಮಾರ್, ಹೀರಾಕುಮಾರ್, ರೇವಣ್ಕುಮಾರ್, ವಿಕಾಸ ಮಂಡಲ ಎಂಬುವರನ್ನು ನಗರ ಠಾಣೆಯ ಪೊಲೀಸರು ಬಂಧಿಸಿ, ಅವರಿಂದ 39 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಾಗಿದೆ.