ಸೋಗಿ ಗ್ರಾಪಂಗೆ ಮುತ್ತಿಗೆ
ಹೂವಿನಹಡಗಲಿ: ಕುಡಿಯುವ ನೀರು, ಬೀದಿ ದೀಪ, ರಸ್ತೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ಸೋಗಿ ಗ್ರಾಮದ ರೇಣುಕ ನಗರ ನಿವಾಸಿಗರು ಶನಿವಾರ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸೋಗಿ ಗ್ರಾಮದ ಹೊರ ವಲಯದ ರೇಣುಕಾ ನಗರಕ್ಕೆ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೂ ಈ ವರೆಗೂ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೇಣುಕಾನಗರ ನಿವಾಸಿಗರು, ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಾ ಖಾಲಿ ಕೊಡಗಳ ಸಮೇತ ಧರಣಿ ನಡೆಸಿದರು.
ರೇಣುಕಾ ನಗರದಲ್ಲಿ 3 ತಿಂಗಳನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇರುವ ಕೈ ಪಂಪ್‌ನ್ನೂ ದುರಸ್ತಿ ಮಾಡಿಸದೇ ಗ್ರಾಪಂ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದರು. ಪಂಚಾಯಿತಿಗೆ ಯಾವುದೇ ಆದಾಯ ಇಲ್ಲ ಎನ್ನುವ ನೆಪ ಹೇಳಿ ರೇಣುಕಾ ನಗರಕ್ಕೆ ಸೌಲಭ್ಯ ನೀಡುವಲ್ಲಿ ಮೀನಮೇಷ ಎಣಿಸುತ್ತಿದ್ದು, ನಾವುಗಳು ಮನುಷ್ಯರಲ್ಲವೇ ಎಂದು ಗ್ರಾಪಂ ಸದಸ್ಯರು ಬೇಜವಾಬ್ದಾರಿಯನ್ನು ಪ್ರಶ್ನಿಸಿದರು.
ಬೀದಿ ದೀಪ ಅಳವಡಿಕೆ ಹೆಸರಿನಲ್ಲಿ ಗ್ರಾಪಂನಲ್ಲಿ ಬೋಗಸ್ ಬಿಲ್‌ಗಳು ಸೃಷ್ಟಿಯಾಗುತ್ತವೆಯು ಹೊರತು ಗ್ರಾಮದ ಕತ್ತಲೆಯ ಪ್ರದೇಶಗಳಿಗೆ ಬೀದಿ ದೀಪ ಅಳವಡಿಸಿಲ್ಲ ಎಂದು ಆರೋಪಿಸುವ ನಾಗರಿಕರು ರೇಣುಕಾನಗರಕ್ಕೆ ಕುಡಿಯುವ ನೀರು, ಬೀದಿ ದೀಪ ಇತರ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.