ಹಲವು ದಶಕಗಳ ಬಳಿಕ ಗೌರಮ್ಮ ಕೆರೆ ಭರ್ತಿ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಜೂ. 9
ಹಲವು ದಶಕಗಳಿಂದ ಮೇ ತಿಂಗಳಲ್ಲಿ ತುಂಬದ ಗೌರಮ್ಮ ಕೆರೆ ಈ ವರ್ಷ ತುಂಬಿರುವುದು ಸಂತಸ ತಂದಿದೆ ಎಂದು ರಾಮಸಾಗರ ಗೌರಮ್ಮ ಕೆರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಸಮಿತಿ ಅಧ್ಯಕ್ಷ, ರೈತ ಮುಖಂಡ ಅಳವಂಡಿ ರೇವಣಸಿದ್ಧಯ್ಯಸ್ವಾಮಿ ಹೇಳಿದರು.
ರೋಹಿಣಿ ಮಳೆಗೆ ತುಂಬಿ ತುಳುಕುತ್ತಿರುವ ಪಟ್ಟಣದ ಸಮೀಪದ ರಾಮಸಾಗರ ಗೌರಮ್ಮ ಕೆರೆಗೆ ಶುಕ್ರವಾರ ಕಮಲಾಪುರ ನೀರಾವರಿ ಇಲಾಖೆ ಉಪವಿಭಾಗದ ಎಇಇ ಡಿ.ಎನ್. ಕುಲಕರ್ಣಿ ಅವರೊಂದಿಗೆ ಭಕ್ತಿಪೂರ್ವಕ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಉತ್ತಮ ಮಳೆಯಾಗಿದ್ದರಿಂದ ಮೇ ತಿಂಗಳಲ್ಲಿ ಕೆರೆ ಭರ್ತಿಯಾಗಿದೆ. ಎಲ್ಎಲ್ಸಿ ಮೂಲಕ ಗೌರಮ್ಮ ಕೆರೆಗೆ ನೀರು ಬಿಡುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಸಹಕರಿಸುತ್ತಿರುವುದು ಶ್ಲಾಘನೀಯವಾಗಿದೆ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರು ನಿಮ್ಮೊಂದಿಗೆ ನಾವು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಗೌರಮ್ಮ ಕೆರೆ ಹೂಳೆತ್ತಲೂ ಒಂದು ಕೋಟಿ ರುಪಾಯಿ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ನೀರು ಸಂಗ್ರಹಣೆಗೆ ಅನುಕೂಲವಾಗಿದೆ. ಹಿರಿಯರು ಸತತ ಹೋರಾಟ ಮಾಡುತ್ತ ಕೆರೆ ಅಭಿವೃದ್ಧಿಪಡಿಸಿದ್ದಾರೆ. ಕೆರೆಯ ನೀರಿನ ಸೋರಿಕೆಯನ್ನು ತಡೆಗಟ್ಟಿದಲ್ಲಿ ಮತ್ತು ಸಕಾಲದಲ್ಲಿ ಹೂಳೆತ್ತುವ ಮೂಲಕ ಸಂರಕ್ಷಿಸಿದಲ್ಲಿ ರೈತರು ಉತ್ತಮ ನೀರಾವರಿ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಕಮಲಾಪುರ ನೀರಾವರಿ ಇಲಾಖೆ ಉಪವಿಭಾಗದ ಎಇಇ ಡಿ.ಎನ್. ಕುಲಕರ್ಣಿ ಬಾಗಿನ ಅರ್ಪಿಸಿ ಮಾತನಾಡಿ, ವರುಣ ದೇವನ ಕೃಪೆಯಿಂದ, ರೈತರು ಮಿತವಾಗಿ ನೀರು ಬಳಕೆ ಮಾಡಿಕೊಂಡಿದ್ದರಿಂದ ಹಾಗೂ ಹೂಳೆತ್ತಿದ ಕಾರಣದಿಂದ ಮೇ ತಿಂಗಳಲ್ಲಿ ಕೆರೆ ಭರ್ತಿ ಆಗಲು ಕಾರಣವಾಗಿದೆ ಎಂದರು.
ಗೌರಮ್ಮ ಕೆರೆಗೆ ಬಾಗಿನ ಅರ್ಪಿಸುವ ಅಂಗವಾಗಿ ಹಮ್ಮಿಕೊಂಡಿದ್ದ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳ ಪೌರೋಹಿತ್ಯವನ್ನು ಎಚ್.ಎಂ. ಶರಣಯ್ಯಸ್ವಾಮಿ ವಹಿಸಿದ್ದರು.
ಸನ್ಮಾನ: ಎಇಇ ಡಿ.ಎನ್. ಕುಲಕರ್ಣಿ ಮತ್ತು ಎಇ ಪುರುಷೋತ್ತಮ ಬಾಗೇವಾಡಿ ಅವರನ್ನು ಕೆರೆ ಸಮಿತಿಯವರು ಸನ್ಮಾನಿಸಿ ಗೌರವಿಸಿದರು. ನಂ.10 ಮುದ್ದಾಪುರ ಗ್ರಾಪಂ ಅಧ್ಯಕ್ಷ ಬಳ್ಳಾರಿ ಮಾರುತಿ, ನಂ.10 ಮುದ್ದಾಪುರ, ರಾಮಸಾಗರ ಗ್ರಾಮಗಳ ರೈತರು, ಗೌರಮ್ಮ ಕೆರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.