ಅಧಿಕಾರಿಗಳೇ ಹುಷಾರ್ ಸಿಸಿ ಕ್ಯಾಮೆರಾಗಳಿವೆ!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 10
ಇನ್ಮುಂದೆ ಸರ್ಕಾರಿ ಇಲಾಖೆ ಅಧಿಕಾರಿಗಳು ಗಂಟೆಗಟ್ಟಲೆ ತಮ್ಮ ಕೆಲಸ ಬಿಟ್ಟು ಟೀ ಕುಡಿಯುವುದಕ್ಕೆ ಹೋಗುವಂತಿಲ್ಲ, ಹರಟೆ ಹೊಡೆಯುವಂತಿಲ್ಲ. ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಮಾಡುವಂತಿಲ್ಲ. ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಹೌದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬರುವ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಡಿಸಿ ಮುಂದಾಗಿದ್ದಾರೆ. ಇದುವರೆಗೆ ಕೇವಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತ್ರ 8 ಕ್ಯಾಮೆರಾ ಅಳವಡಿಸಲಾಗಿತ್ತು. ಇನ್ನೂ 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಲಾಖೆಯ ಕೆಲಸಗಳಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದಾರೆ.
ಸರ್ಕಾರಿ ಕಚೇರಿಗೆ ಹೋದರೆ ಕೆಲ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಇರುವುದಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂದರೆ ಟೀ ಕುಡಿಯುವುದಕ್ಕೆ, ಮತ್ತೊಂದು ಕಚೇರಿಗೆ ಹೋಗಿದ್ದಾರೆ ಎಂದು ಹೇಳಿ ಸಮಯ ದೂಡುತ್ತಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುವುದು ಸಾಮಾನ್ಯವಾಗಿತ್ತು. ಸಾರ್ವಜನಿಕರು ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರು ಸಿಬ್ಬಂದಿಯ ಇಂತಹ ಧೋರಣೆಗೆ ಹಿಡಿಶಾಪ ಹಾಕುತ್ತಿದ್ದರು. ಈ ವ್ಯವಸ್ಥೆಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಈಗ ಮುಂದಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಡಿಸಿ ಕಣ್ಗಾವಲು ಹಾಕಿದ್ದಾರೆ.
8 ಕ್ಯಾಮೆರಾಗಳ ಅಳವಡಿಕೆ: ಈಗಾಗಲೇ ಜಿಲ್ಲಾಧಿಕಾರಿ ಬಿಸ್ವಾಸ್ ತಮ್ಮ ಕಚೇರಿಯ ಹೊರ, ಒಳಗಡೆ 8 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಆರಂಭದಲ್ಲಿ ತಮ್ಮ ಇಲಾಖೆಯಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದ ಅವರು, ಇದೀಗ ತಮ್ಮ ಕಚೇರಿಯ ಆವರಣದಲ್ಲಿ ಬರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಭೂ ದಾಖಲೆಗಳ ಇಲಾಖೆ, ಸರ್ವೇ ಇಲಾಖೆ, ಗ್ರಾಹಕರ ವೇದಿಕೆಯ ಕಚೇರಿಯ ಮುಂಭಾಗದಲ್ಲಿ, ಡಿಸಿ ಕಚೇರಿಯ ಹಿಂಭಾಗದಲ್ಲಿ, ದಾಖಲೆಗಳ ರೂಮ್ನಲ್ಲಿ ಸೇರಿದಂತೆ ಸುಮಾರು 8 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಇನ್ನು ಅಳವಡಿಸುವ ಕಾರ್ಯ ನಡೆದಿದೆ. ದಾಖಲೆಗಳ ಕೊಠಡಿಯಲ್ಲಿ ಯಾವುದೇ ಅವಘಡ ನಡೆದರೂ ತಿಳಿಯುವ ಉದ್ದೇಶದಿಂದಾಗಿ ಅಲ್ಲಿಯೂ ಕ್ಯಾಮೆರಾ ಅಳವಡಿಸಲಾಗಿದೆ.
ಪ್ರಯೋಜನ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಹೆಚ್ಚಾಗುತ್ತಿದ್ದು, ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುವ ಅಧಿಕಾರಿಗಳು ಹೆಚ್ಚಾಗಿದ್ದಾರೆ. ಇನ್ನು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂಬ ಆರೋಪ ಇರುವುದರಿಂದ ಇಲಾಖೆಯಲ್ಲಿ ಪಾರದರ್ಶಕತೆ ತರಲು ಕ್ಯಾಮೆರಾಗಳು ನೆರವಾಗುತ್ತವೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರೊಂದಿಗೆ ವರ್ತಿಸುವ ರೀತಿ, ಸಾರ್ವಜನಿಕರು ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ವರ್ತಿಸುವ ರೀತಿ ಇದರಿಂದ ಗೊತ್ತಾಗುತ್ತದೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದು, ಕೆಲಸ ನಿರ್ವಹಿಸುವುದರ ಮೇಲೆ ನಿಗಾವಹಿಸಬಹುದು. ಕಚೇರಿ ಅವಧಿಯಲ್ಲಿ ಸಿಬ್ಬಂದಿ ಜನರಿಗೆ ಲಭ್ಯ ಇರುವಂತೆ ಮಾಡುವುದು ಸೇರಿದಂತೆ ಇತರ ಕಾರಣಗಳಿಗಾಗಿ ಸಿಸಿ ಕ್ಯಾಮೆರಾಗಳು ಉಪಯೋಗಿ.
ಸಾರ್ವಜನಿಕರಿಂದ ದೂರು ಅಗತ್ಯವಿಲ್ಲ: ಜಿಲ್ಲಾಧಿಕಾರಿ ತಮ್ಮ ಚೇಂಬರ್ನಲ್ಲೇ ಕುಳಿತು ಎಲ್ಲ ಇಲಾಖೆಗಳನ್ನು ಕಂಟ್ರೋಲ್ ಮಾಡುವಂತಾಗುತ್ತದೆ. ಇನ್ನು ಸಾರ್ವಜನಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ವರ್ತಿಸುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿ ಬರುವುದಿಲ್ಲ.
ದೂರು ನೀಡಿದರೂ, ಅದು ವಾಸ್ತವತೆಯನ್ನು ಸಿಸಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ದೃಶ್ಯಗಳಿಂದ ತಿಳಿಯಬಹುದು. ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಮೈಯೆಲ್ಲಾ ಕಣ್ಣಾಗಿ, ಕಟ್ಟುನಿಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಇಲ್ಲವಾದರೆ ಶಿಸ್ತಿನ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ಇದು ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾದರೆ, ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಂಟಕವಾಗಲಿದೆ. ಒಟ್ಟಾರೆ ಜಿಲ್ಲಾಧಿಕಾರಿಗಳು ಇಲಾಖೆಗಳಲ್ಲಿ ಪಾರದರ್ಶಕತೆ ತರುವಲ್ಲಿ ಒಂದೊಂದಾಗಿ ಹೆಜ್ಜೆ ಇಟ್ಟಿರುವುದು ಉತ್ತಮ ಕಾರ್ಯ ಎಂದೇ ಜನತೆ ಪ್ರಶಂಸಿಸುತ್ತಿದ್ದಾರೆ.
-ಶಶಿಧರ ಮೇಟಿ