ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಪಂ ಅವಾಂತರ: ಚರಂಡಿಯಾದ ಮೈದಾನ

Vishwanath S
Updated On : 11 Jun 2013, 10:59 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 10
ಕ್ರೀಡಾ ಚಟುವಟಿಕೆಗಳಿಗೆ, ಕ್ರೀಡಾ ಮೈದಾನಕ್ಕೆ ಹೆಚ್ಚೆಚ್ಚು ಪೂರಕ ಕಾರ್ಯಗಳನ್ನು ಕೈಗೊಳ್ಳಬೇಕಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತವೇ ಇಲ್ಲಿನ ಸರ್ಕಾರಿ ಪ್ರೌಢಶಾಲಾ ಮೈದಾನ ಅಧ್ವಾನಗೊಳ್ಳಲು ಪ್ರಮುಖ ಕಾರಣವಾಗಿದೆ.
ಹೌದು, ಪಟ್ಟಣದ ಸರ್ಕಾರಿ ಪ್ರೌಢಶಾಲೆ 6 ಎಕರೆಗೂ ಹೆಚ್ಚು ವಿಶಾಲ ಮೈದಾನ ಹೊಂದಿದೆ. ಈ  ಮೈದಾನ ಸದ್ಯ ಚರಂಡಿ ನೀರಿನಿಂದ ಆವೃತವಾಗಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಪಟ್ಟಣ ಪಂಚಾಯಿತಿ ಮಾಡಿದ ಅವಾಂತರದಿಂದಾಗಿ ಇಡೀ ಮೈದಾನ ಹದಗೆಟ್ಟಿದೆ. ಇದಲ್ಲದೆ ಈ ಮೈದಾನ ಕ್ರೀಡಾ ಚಟವಟಿಕೆಗೆ ಬಳಕೆಯಾಗದೆ ಬೇರೆಲ್ಲ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ವಿಪರ್ಯಾಸವೇ ಸರಿ. ಮೈದಾನವನ್ನು ಸಮತಟ್ಟುಗೊಳಿಸಿ ವಿವಿಧ ಬಗೆಯ ಕ್ರೀಡಾ ಚಟವಟಿಕೆಗಳು ನಿರಂತರ ನಡೆಯುತ್ತಿರಲಿ ಎಂದು ಹಂಬಲಿಸುತ್ತಿರುವ ಕ್ರೀಡಾಪ್ರೇಮಿಗಳು ಮೈದಾನ ತಲುಪಿರುವ ಅವಸ್ಥೆ ನೋಡಿ ನೊಂದಿದ್ದಾರೆ. ಈ ಬಗೆಯ ವಿಶಾಲ ಮೈದಾನವಿದ್ದರೂ ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂದು ವ್ಯಥೆ ಪಟ್ಟುಕೊಳ್ಳುತ್ತಿದ್ದಾರೆ.
ಪಪಂ ಅವಾಂತರ: ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಉಜ್ಜಿನಿ ರಸ್ತೆಯ ಮಗ್ಗುಲಲ್ಲಿ ಮೈದಾನಕ್ಕೆ ಅಂಟಿಕೊಂಡಿರುವ ಸ್ಥಳವೊಂದರಲ್ಲಿ ಓವರ್‌ಹೆಡ್ ಟ್ಯಾಂಕ್‌ನ್ನು ನಿರ್ಮಿಸಿದೆ. ಟ್ಯಾಂಕ್‌ನ ಹೆಚ್ಚುವರಿ ನೀರನ್ನು ಚರಂಡಿ ಮೂಲಕ ಬೇರೆಡೆಗೆ ಸಾಗಿಸುವ ಮಾರ್ಗ ಕಂಡುಕೊಳ್ಳಬೇಕಿತ್ತು. ಆದರೆ ಪಟ್ಟಣ ಪಂಚಾಯಿತಿ, ಈ ಕಾರ್ಯಕ್ಕೆ ಮುಂದಾಗದೆ ನೀರು ಸಂಪೂರ್ಣ ಸರ್ಕಾರಿ ಪ್ರೌಢಶಾಲೆ ಮೈದಾನಕ್ಕೆ ಹರಿಯ ಬಿಡುತ್ತಿದೆ. ಇದರಿಂದ ಮೈದಾನ ಕೆಸರು ಗದ್ದೆಯಂತಾಗಿದೆ. ಈ ಸಂಬಂಧ ಶಾಲೆಯವರು ಪಪಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೈದಾನವನ್ನು ಗುರಿಯಾಗಿರಿಸಿಕೊಂಡು ಮತ್ತೊಂದು ಬಗೆಯ ತೊಂದರೆ ನೀಡಲು ಮುಂದಾಗಿರುವುದು ಜನರ ಉಬ್ಬೇರುವಂತೆ ಮಾಡಿದೆ.
ತಾತ್ಕಾಲಿಕ ಚರಂಡಿ: ಟ್ಯಾಂಕ್‌ನಿಂದ ಹರಿದು ಬರುವ ನೀರನ್ನು ಸರಾಗವಾಗಿ ಮೈದಾನದೊಳಗೆ ಹರಿಯಲು ಇತ್ತೀಚೆಗೆ ಜೆಸಿಬಿಯಿಂದ ತಾತ್ಕಾಲಿಕ ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಮೈದಾನದ ಮಧ್ಯದಲ್ಲಿ ಚರಂಡಿ ನೀರು ಹರಿಯುವಂತಾಗಿದೆ. ಇಂತಹ ಕ್ರಿಯೆಯನ್ನೇ ಬಯಸಿದಂತಿದ್ದ ದಾರಿ ಹೋಕರು ತಾತ್ಕಾಲಿಕ ಚರಂಡಿ ನಿರ್ಮಾಣವನ್ನೇ ನೆಪವಾಗಿರಿಸಿಕೊಂಡು ಮಲ, ಮೂತ್ರ ವಿಸರ್ಜನೆಗೆ ಉಪಯೋಗಿಸತೊಡಗಿದ್ದಾರೆ. ಮೈದಾನ ಚರಂಡಿ ನೀರಿನಿಂದ ಮಲಿನಗೊಂಡು ದುರ್ವಾಸನೆಯಿಂದ ಕೂಡಿದೆ. ಇದು ಬೆಳಗ್ಗೆ ವಾಯುವಿಹಾರಕ್ಕೆ ತೆರಳುವ ಹೆಚ್ಚು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದೆ.
ಪಟ್ಟಣ ಪಂಚಾಯಿತಿಯವರ ಕ್ರಿಯೆಯಿಂದ ಬೇಸತ್ತ ಪ್ರೌಢಶಾಲೆಯವರು ದಿಕ್ಕುತೋಚದೆ ವಿದ್ಯಾರ್ಥಿಗಳಿಂದ ಮೈದಾನದಲ್ಲಿನ ಕುರುಚಲು ಗಿಡಗಳನ್ನು ಕೀಳಿಸಿ ನೀರು ಒಂದು ಬದಿಯಲ್ಲಿ ಹೋಗುವಂತೆ ಮಾಡಿಸಲು ಮುಂದಾಗಿದ್ದಾರೆ.
ಕ್ರೀಡಾ ಮೈದಾನಕ್ಕೆ ಉತ್ತೇಜನ ನೀಡಬೇಕಾದ ಪಟ್ಟಣ ಪಂಚಾಯಿತಿಯವರು ಈಗಲಾದರೂ ಗಮನಹರಿಸಿ ಮೈದಾನವನ್ನು ಉತ್ತಮವಾಗಿರಿಸಿಕೊಂಡು ಕ್ರೀಡಾ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಶಾಲಾ ವಿದ್ಯಾರ್ಥಿಗಳು, ಪ,ಟ್ಟಣದ ಕ್ರೀಡಾಪ್ರೇಮಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement