'ಆಟೋರಾಜ'ನಿಂದ ಸಮಾಜಕ್ಕೆ ಉತ್ತಮ ಸಂದೇಶ
ಕನ್ನಡಪ್ರಭ ವಾರ್ತೆ ಬಳ್ಳಾರಿ ಜೂ. 11-
ಸಮಾಜದಲ್ಲಿ ಆಟೋ ಚಾಲಕರ ಪಾತ್ರ, ಅವರ ಜೀವನ ಮತ್ತು ಸಾಮಾಜಿಕ ಕಾಳಜಿಯುಳ್ಳ ಸಿನಿಮಾ 'ಆಟೋರಾಜ' ಆಗಿದ್ದು, ಚಿತ್ರದಿಂದ ಉತ್ತಮ ಸಂದೇಶ ರವಾನೆಯಾಗಲಿದೆ ಎಂದು ನಟ, ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು.
ರಾಜ್ಯಾದ್ಯಂತ ಜೂ.21ರಂದು ತೆರೆ ಕಾಣಲಿರುವ ಅವರ 21ನೇ ಚಿತ್ರ ಆಟೋರಾಜದ ಪ್ರಚಾರಕ್ಕಾಗಿ ಮಂಗಳವಾರ ಬಳ್ಳಾರಿಗೆ ಆಗಮಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ನಟನಾಗಿ ಅಭಿನಯಿಸಿದ ಸಿನಿಮಾಗಳಲ್ಲಿ ಇದು 21ನೇ ಸಿನಿಮಾ. ಕನ್ನಡ ಚಿತ್ರರಂಗದ ಮೇರುನಟ ದಿ. ಶಂಕರ್ನಾಗ್ ಅವರ 1987ರಲ್ಲಿ ತೆರೆಕಂಡ 'ಆಟೋರಾಜ' ಚಿತ್ರವನ್ನು ಅದೇ ಹೆಸರಿನಲ್ಲಿ ಇದೀಗ ಚಿತ್ರೀಕರಿಸಿರುವುದು ಖುಷಿ ಕೊಟ್ಟಿದೆ. ಚಿತ್ರಕ್ಕೆ ಯಾವುದೇ ಚ್ಯುತಿ ಬಾರದಂತೆ ಜವಾಬ್ದಾರಿ ಮತ್ತು ಜಾಗರೂಕತೆಯಿಂದ ನಿರ್ಮಿಸಲಾಗಿದೆ. ಚಿತ್ರವನ್ನು ಎಲ್ಲ ವರ್ಗಕ್ಕೂ ಇಷ್ಟವಾಗುವಂತೆ ತೆಗೆಯಲಾಗಿದ್ದು, ಸಾಮಾಜಿಕ ಹಿನ್ನೆಲೆಯುಳ್ಳ ಎಲ್ಲ ಅಂಶಗಳೂ ಚಿತ್ರದಲ್ಲಿವೆ. ಆಟೋರಾಜ ಸಿನಿಮಾದ ಹೆಚ್ಚಿನ ಭಾಗವನ್ನು ಬೆಂಗಳೂರಿನಲ್ಲಿ, ಕೆಲವು ದೃಶ್ಯಗಳನ್ನು ಮುಂಬೈಯಲ್ಲಿ ಚಿತ್ರೀಕರಿಸಲಾಗಿದೆ. ಹಾಡುಗಳನ್ನು ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ಚಿತ್ರಿಸಲಾಗಿದೆ ಎಂದು ವಿವರಿಸಿದರು.
ಚಿತ್ರದ ನಿರ್ಮಾಪಕ ವಿಶ್ವ ಮಾತನಾಡಿ, ಇದುವರೆಗೂ ನೋಡದೆ ಇರೋ ವಿಶೇಷ ಪಾತ್ರದಲ್ಲಿ ಈ ಸಿನಿಮಾ ನೋಡಲಿದ್ದೀರಿ. ವಿಶೇಷತೆವುಳ್ಳ ಸಿನಿಮಾ ಇದಾಗಿದ್ದು, ತಪ್ಪದೇ ಚಲನಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡುವಂತೆ ಕೋರಿದರು. ಇದಕ್ಕೂ ಮುನ್ನ ನಗರದ ನಟರಾಜ್ ಚಿತ್ರಮಂದಿರದಿಂದ ಆಟೋರಾಜ ಚಿತ್ರದ ಕುರಿತು ನಗರದ ಪ್ರಮುಖ ರಸ್ತೆಗಳಲ್ಲಿ ಆಟೋದಲ್ಲಿ ರೋಡ್ ಶೋ ನಡೆಸಿದರು.