ದುರ್ನಾತ ಬೀರುವ ಚರಂಡಿಯಿಂದ ಮುಕ್ತಿ ಎಂದು?
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಈಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿನ ಚರಂಡಿ ಗಬ್ಬುನಾರುತ್ತಿದೆ. ದುರ್ನಾತ ಬೀರುವ ಚರಂಡಿಯನ್ನು ಸ್ವಚ್ಛಗೊಳಿಸಿ ನಮ್ಮನ್ನು ಮುಕ್ತಿಗೊಳಿಸಿ ಎನ್ನುವುದು ಪಟ್ಟಣದ ನಾಗರಿಕರ ನಿತ್ಯದ ಬೇಡಿಕೆ.
ಇಲ್ಲಿನ ಗಂ.ಭೀ. ಸರ್ಕಾರಿ ಪದವಿಪೂರ್ವ ಹಾಗೂ ಜಿವಿಪಿಪಿ ಸರ್ಕಾರಿ ಡಿಗ್ರಿ ಕಾಲೇಜುಗಳಿಗೆ ನಿತ್ಯ ಈ ರಸ್ತೆಯ ಮೇಲೆಯೇ ಎರಡೂವರೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ನೂರಾರು ಶಿಕ್ಷಕ, ಉಪನ್ಯಾಸಕರು, ಸಾರ್ವಜನಿಕರು ನಡೆದಾಡುತ್ತಾರೆ. ಆದರೆ ಇಲ್ಲಿ ಬೀರುವ ದುರ್ನಾತದಿಂದ ಮೂಗು ಮುಚ್ಚಿಕೊಂಡೇ ಸಂಚರಿಸುವ ಪರಿಸ್ಥಿತಿ ಒದಗಿಬಂದಿದೆ.
ನಿರ್ಲಕ್ಷ್ಯ: ರಾಮನಗರದ ರೈತರ ಓಣಿ, ಗುರುಭವನ, ರಥಬೀದಿ, ಶ್ರೀಕೃಷ್ಣದೇವರಾಯ ರಸ್ತೆ, ಪೊಲೀಸ್ ವಸತಿಗೃಹ, ಕಡ್ಲಬಾಳು ಏರಿಯಾ ಸೇರಿದಂತೆ ಪಟ್ಟಣದ ಅರ್ಧಕ್ಕೂ ಅಧಿಕ ಪ್ರದೇಶಗಳಿಂದ ತ್ಯಾಜ್ಯ ಹೊತ್ತು ತರುವ ಚರಂಡಿ ನೀರು ಈಶ್ವರ ದೇವಸ್ಥಾನದ ಮುಂಭಾಗದ ರಸ್ತೆಯ ಮೂಲಕ ಹಗರಿ ಹಳ್ಳವನ್ನು ಸೇರುತ್ತದೆ. ಆದರೆ ಚರಂಡಿಯಲ್ಲಿ ಸಾಕಷ್ಟು ಹೂಳು ಮತ್ತು ಸರಿಯಾದ ನಿರ್ವಹಣೆ ಇಲ್ಲದ ಕಾರಣ ಚರಂಡಿಯ ಅಷ್ಟೂ ನೀರು ರಸ್ತೆ ಮೇಲೆ ಹರಿಯುತ್ತದೆ. ಇದರಿಂದಾಗಿ ರಸ್ತೆ ಸುತ್ತಮುತ್ತ ದುರ್ನಾತದ್ದೇ ಕಾರುಬಾರು. ಇದರಿಂದಾಗಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಶಪಿಸುತ್ತಾ ಸಾಗುವಂತಾಗಿದೆ.
ನುಣುಚಿಕೊಳ್ಳುವ ಗ್ರಾಪಂಗಳು: ಚರಂಡಿ ಹರಿಯುವ ಪ್ರದೇಶ ಹಗರಿಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಆದರೆ ಹರಿದು ಬರುವ ಹೊಲಸು ತ್ಯಾಜ್ಯವೆಲ್ಲ ಚಿಂತ್ರಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶಕ್ಕೆ ಸೇರಿದ್ದು. ರಸ್ತೆ ಮೇಲೆ ಹರಿಯುತ್ತಿರುವ ಗಬ್ಬುನಾತದ ಚರಂಡಿಯನ್ನು ಸ್ಪಚ್ಛಗೊಳಿಸುವುದು ಚಿಂತ್ರಪಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದೆ ಎಂದು ಹಗರಿಬೊಮ್ಮನಹಳ್ಳಿ ಗ್ರಾಪಂನವರು ಹೇಳುತ್ತಾರೆ. ಇತ್ತ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಹಗರಿಬೊಮ್ಮನಹಳ್ಳಿ ಗ್ರಾಪಂನವರೇ ಚರಂಡಿ ಸ್ವಚ್ಛಗೊಳಿಸಬೇಕೆಂದು ಚಿಂತ್ರಪಳ್ಳಿ ಗ್ರಾಮ ಪಂಚಾಯಿತಿಯವರು ಹೇಳುತ್ತಾರೆ.
ಒಬ್ಬರ ಮೇಲೆ ಒಬ್ಬರು ಕೈತೋರಿಸಿ ತಮ್ಮ ಜವಾಬ್ದಾರಿಯಿಂದ ನುಳುಚಿಕೊಳ್ಳುತ್ತಿರುವ ಎರಡು ಗ್ರಾಪಂಗಳ ಆಡಳಿತವನ್ನು ಜನತೆ ಮಾತ್ರ ಶಪಿಸುತ್ತಿದ್ದಾರೆ. ಎರಡು ಗ್ರಾಮ ಪಂಚಾಯಿತಿಗಳ ತಿಕ್ಕಾಟದ ಮಧ್ಯೆ ದುರ್ನಾತ ಬೀರುವ ಚರಂಡಿಯ ಗಬ್ಬುನಾತವನ್ನು ಸಹಿಸಿಕೊಳ್ಳದೆ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ರಾಣಗೊಳ್ಳುವುದೊಂದೆ ಬಾಕಿ ಇದೆ.