ಸರ್ಕಾರಿ ನೌಕರರ ಸಂಘದ ಕಚೇರಿಗೆ ಬೀಗ
ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೌಖಿಕ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಘದ ಕಚೇರಿ ಸೀಜ್ ಮಾಡಿ ಬೀಗ ಜಡಿದಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬರುವ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿ ಮನೋರಂಜನೆಗಾಗಿ ಇದ್ದು, ಇಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ಬಂದಿದ್ದರಿಂದ ಚುನಾವಣೆ ಪೂರ್ವದಲ್ಲೇ ಕಚೇರಿಗೆ ಬೀಗ ಹಾಕಿದ್ದರು. ಆದರೆ ಚುನಾವಣೆ ಅನಂತರ ಸಂಘದವರು ಬೀಗ ತೆರೆದಿದ್ದರು. ಸೋಮವಾರ ಕಚೇರಿ ಆವರಣದಲ್ಲಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಸಂಘದ ಕಚೇರಿಯ ಬೀಗ ತೆಗೆದಿರುವುದನ್ನು ಜಿಲ್ಲಾಧಿಕಾರಿ ನೋಡಿ ಕೋಪಗೊಂಡಿದ್ದರು. ಮಂಗಳವಾರ ಜಿಲ್ಲಾಧಿಕಾರಿ ಬಿಸ್ವಾಸ್ ಅವರ ಮೌಖಿಕ ಆದೇಶದ ಮೇರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯನ್ನು ಸೀಜ್ ಮಾಡಿ, ಬೀಗ ಹಾಕಿದ್ದಾರೆ. ಪರವಾನಗಿ ಇಲ್ಲದೆ ಯಾರೂ ಕಚೇರಿಯನ್ನು ತೆರೆಯುವಂತಿಲ್ಲ, ತೆರೆದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.