ನಾಳೆ ಸ್ಮರಣೋತ್ಸವ
ಕೊಟ್ಟೂರು: ಚಿಕೇನಕೊಪ್ಪದ ಚನ್ನವೀರ ಶರಣರ 18ನೇ ಪುಣ್ಯ ಸ್ಮರಣೋತ್ಸವ ಮತ್ತು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜೂ. 16ರಂದು ಇಲ್ಲಿನ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾಮೂರ್ತಿ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶಿವಶಾಂತವೀರ ಶರಣರು ಸಮಾರಂಭದ ಸಾನ್ನಿಧ್ಯ ವಹಿಸುತ್ತಾರೆ. ಅನುರಾದಮ್ಮ, ಗಂಗಮ್ಮ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಮುಖ್ಯಗುರು ಯು. ಜಗನ್ನಾಥ ಪ್ರವಚನ ನೀಡಲಿದ್ದಾರೆ ಎಂದು ಚನ್ನವೀರ ಶರಣರ ಬಳಗದ ಕಾರ್ಯದರ್ಶಿ ದೇವರಮನಿ ಕರಿಯಪ್ಪ ತಿಳಿಸಿದ್ದಾರೆ.
ಟವೇರಾ ಡಿಕ್ಕಿ: ಮಹಿಳೆ ಸಾವು
ಬಳ್ಳಾರಿ: ಟವೇರಾ ಗಾಡಿಯೊಂದು ಮಹಿಳೆಯೋರ್ವಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಕುಡಿತಿನಿ ಪೊಲೀಸ್ ಠಾಣೆಯ ವ್ಯಾಪ್ತಿಯ ಹೊಸ ದರೋಜಿಯಲ್ಲಿ ನಡೆದಿದೆ. ಮೃತಳನ್ನು ಹೊನ್ನಳ್ಳಿ ಗ್ರಾಮದ ಹೊನ್ನೂರಮ್ಮ (35) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಹೊಸ ದರೋಜಿ ಗ್ರಾಮದಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಟವೇರಾ ಗಾಡಿ ಬಂದು ಡಿಕ್ಕಿ ಹೊಡೆದ ಪರಿಣಾಮ ಹೊನ್ನೂರಮ್ಮ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ ನಿಧನ
ಹೊಸಪೇಟೆ: ತಾಲೂಕಿನ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಎನ್. ನಾಗರಾಜ (46) ಶುಕ್ರವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯ ಸಂಸ್ಕಾರ ಶುಕ್ರವಾರ ಚಿಲಕನಹಟ್ಟಿ ಸ್ವಗ್ರಾಮದಲ್ಲಿ ನಡೆಯಿತು.
ಸಂತಾಪ: ನಾಗರಾಜ ನಿಧನಕ್ಕೆ ಚಿಲಕನಹಟ್ಟಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಮತ್ತು ತಾಪಂ ಮಾಜಿ ಅಧ್ಯಕ್ಷ ಪಿ. ಓಬಪ್ಪ ಸಂತಾಪ ಸೂಚಿಸಿದ್ದಾರೆ.