ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಬಳ್ಳಾರಿ: ಆಟೋ ಚಾಲಕನೋರ್ವ ತನ್ನ ಆಟೋದಲ್ಲಿ ಬಿಟ್ಟು ಹೋದ ಚೀಲದಲ್ಲಿ 14 ತೊಲೆ ಬಂಗಾರವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಬಳ್ಳಾರಿಯ ಕೌಲ್ಬಜಾರ್ನ ಪಾಪಿನಾಯಕ್ ಎಂಬ ಆಟೋ ಚಾಲಕ ಈ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರು ಬಡವರಾದರೂ ಬಂಗಾರ ಹಿಂದಿರುಗಿಸುವ ಮೂಲಕ ಮಾದರಿಯಾಗಿದ್ದಾನೆ. ಈ ಘಟನೆ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಮುರುಗಣ್ಣನವರ್ ಹಾಗೂ ಕೌಲ್ಬಜಾರ್ ಸಿಪಿಐ ಉಮೇಶ್ ನಾಯಕ್ ಪತ್ರಿಕಾಗೋಷ್ಠಿ ನಡೆಸಿ, ಮಾಹಿತಿ ನೀಡಿದರು. ಬಳ್ಳಾರಿಯ ಇರ್ಫಾನ್ ಎಂಬವರು ತಮ್ಮ ಕುಟುಂಬದೊಂದಿಗೆ ಜೂ. 10ರಂದು ಬೆಳಗಿನ ಜಾವ ಬೆಂಗಳೂರಿನಿಂದ ಬಳ್ಳಾರಿಗೆ ಬಂದು ಆಟೋದಲ್ಲಿ ಕೌಲ್ಬಜಾರ್ನಲ್ಲಿರುವ ತಮ್ಮ ಮನೆಗೆ ಹೋಗಿದ್ದಾರೆ. ಆಟೋದಲ್ಲಿ ನಾಲ್ಕು ಬ್ಯಾಗ್ ಇಟ್ಟಿದ್ದು, ಅದರಲ್ಲಿ ಒಂದು ಬ್ಯಾಗ್ ಮರೆತು ಹೋಗಿದ್ದರು.
ಕೂಡಲೇ ಎಚ್ಚೆತ್ತ ಇರ್ಫಾನ್ ಕುಟುಂಬದವರು ಆಟೋದ ಪತ್ತೆಗಾಗಿ ಹುಡುಕಾಟ ನಡೆಸಿದರು. ಆಟೋ ಚಾಲಕನ ವಿಳಾಸ ಹಾಗೂ ಫೋನ್ ನಂಬರ್ ಪತ್ತೆ ಹಚ್ಚಿದ್ದರು. ಆದರೆ ಆಟೋ ಚಾಲಕನ ಮನೆಗೆ ಹೋಗಿ ಬ್ಯಾಗ್ ತರಲು ಆಗಿರಲಿಲ್ಲ. ಜೂ. 12ರಂದು ಕೌಲ್ಬಜಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕಾರ್ಯೋನ್ಮುಖರಾದ ಇನ್ಸ್ಪೆಕ್ಟರ್ ಉಮೇಶ್ ನಾಯಕ್ ಮತ್ತು ಸಿಬ್ಬಂದಿ ಜೂ. 14ರಂದು ಇರ್ಫಾನ್ನೊಂದಿಗೆ ನಗರದ ರಾಮಾಂಜನೇಯ ನಗರದ ಆಟೋ ಚಾಲಕ ಪಾಪಿನಾಯಕ್ನ ಮನೆಗೆ ಹೋಗಿದ್ದಾರೆ. ಬ್ಯಾಗ್ನವರು ಬಂದರೆ ಕೊಡಬೇಕೆಂದು ಹಾಗೆಯೇ ಎತ್ತಿಟ್ಟಿದ್ದೇನೆ ಎಂದು ಪಾಪಿನಾಯಕ್ ಹೇಳಿ ಬ್ಯಾಗ್ನ್ನು ಹಿಂದಕ್ಕೆ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಬ್ಯಾಗ್ನಲ್ಲಿ ಬಂಗಾರದ ಸರ, ಮಾಂಗಲ್ಯ, ಉಂಗುರ, ಎರಡು ಕೈಗಡಿಯಾರಗಳು ಇದ್ದವು. ಅದರಲ್ಲಿದ್ದ ಯಾವುದೇ ವಸ್ತುಗಳನ್ನು ದುರ್ಬಳಕೆ ಮಾಡಿಕೊಂಡಿರಲಿಲ್ಲ. ಪೊಲೀಸರು ಆಟೋ ಚಾಲಕ ಪಾಪಿನಾಯಕ್ನ ಪ್ರಾಮಾಣಿಕತೆಗೆ ಮೆಚ್ಚಿಕೊಂಡಿದ್ದಾರೆ. ಅವರ ಮೇಲೆ ಪ್ರಕರಣ ದಾಖಲು ಮಾಡದೆ, ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇಂತಹ ಘಟನೆಗಳು ನಡೆದಾಗ ಯಾರು ಹಿಂದಕ್ಕೆ ನೀಡದೆ, ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಆದರೆ ಪಾಪಿನಾಯಕ್ ಬ್ಯಾಗ್ ಹಿಂದಕ್ಕೆ ನೀಡಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.