ಶಕ ಪುರುಷನ ಮಹಾರಥೋತ್ಸವ ಇಂದು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 14
ಜಿಲ್ಲೆಯ ಪ್ರಸಿದ್ಧ ಆಧ್ಯಾತ್ಮಿಕ ಸ್ಥಳಗಳಲ್ಲಿ ಬಳ್ಳಾರಿ ತಾಲೂಕಿನ, ಆಂಧ್ರದ ಗಡಿಗೆ ಹೊಂದಿಕೊಂಡಿರುವ ಚೇಳ್ಳಗುರ್ಕಿ ಗ್ರಾಮವೂ ಒಂದು. 20ನೇ ಶತಮಾನದಲ್ಲಿ ಶ್ರೀ ಎರ್ರಿತಾತನವರು ನೆಲೆಸಿ ಆಧ್ಯಾತ್ಮಿಕ ಚಿಂತನೆ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಿ ಜೀವ ಸಮಾಧಿಯಾಗುವ ಮೂಲಕ ಚೇಳ್ಳಗುರ್ಕಿ ಆಧ್ಯಾತ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಪ್ರತಿವರ್ಷ ಮೇ ಅಥವಾ ಜೂನ್ನಲ್ಲಿ ಮಹಾರಥೋತ್ಸವ, ಹೂವಿನ ರಥೋತ್ಸವ ಹಾಗೂ ಕಾರ್ತಿಕ ಮಾಸದಲ್ಲಿ ಮುತ್ತಿನ ರಥೋತ್ಸವ ಕಾರ್ಯಕ್ರಮ ನಡೆಯುವ ಮೂಲಕ ಶ್ರೀ ಕ್ಷೇತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಶ್ರೀ ಎರ್ರಿತಾತನವರ ಮಹಾರಥೋತ್ಸವ ಜೂ. 15ರಂದು ಸಂಜೆ 5 ಗಂಟೆಗೆ ಹಾಗೂ ಹೂವಿನ ರಥೋತ್ಸವ ಜೂ. 16ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಈ ವಿಶೇಷ ಲೇಖನ.
ವಿಶೇಷ ಧಾರ್ಮಿಕ ಕಾರ್ಯಕ್ರಮ: ರಾಜ, ಮಹಾರಾಜರ ಕಾಲದಿಂದಲೂ ಕೆಲವು ದೇವಸ್ಥಾನಗಳು ರಾಜ್ಯದಲ್ಲಿ ಸಾಕಷ್ಟು ಹೆಸರು ಪಡೆದಿವೆ. ಆದರೆ ತೀರಾ ಇತ್ತೀಚಿನ ದೇವಸ್ಥಾನಗಳಲ್ಲಿ ಬಳ್ಳಾರಿಯ ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿ ದೇವಸ್ಥಾನವೂ ಒಂದಾಗಿದೆ. ಶ್ರೀ ಎರ್ರಿತಾತನವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಅನೇಕ ಪವಾಡಗಳಿಂದಾಗಿ ಅವರ ಜೀವ ಸಮಾಧಿ ಅನಂತರ ಕ್ಷೇತ್ರ ಧಾರ್ಮಿಕ ರೂಪ ಪಡೆದುಕೊಳ್ಳಲು ಕಾರಣವಾಗಿದೆ. ಮೇ ಅಥವಾ ಜೂನ್ನಲ್ಲಿ ನಡೆಯುವ ರಥೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದಿದೆ.
ಸಪ್ತ ಭಜನೆ ಎಂಬ ವಿಶಿಷ್ಟ ಆಚರಣೆ: ಜಾತ್ರೆಯ ಪೂರ್ವದ 7 ದಿನದ 24 ಗಂಟೆಗಳ ಕಾಲ ಸಪ್ತ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆಂಧ್ರ ಹಾಗೂ ಕರ್ನಾಟಕದ ಆಯ್ದ 28 ಗ್ರಾಮಗಳ ಭಕ್ತರು 'ಓಂ ನಮಃ ಶಿವಾಯ' ಎಂಬ ಮಂತ್ರ ಜಪಿಸುತ್ತಾ, ಕುಣಿತದ ಮೂಲಕ ಭಕ್ತಿ ಸೇವೆ ಮಾಡುವುದು ನಿಜಕ್ಕೂ ವಿಶೇಷ. ಅಬಾಲವೃದ್ಧರಾದಿಯಾಗಿ ಸಪ್ತ ಭಜನೆಯಲ್ಲಿ ಪಾಲ್ಗೊಂಡು ಭಕ್ತಿ ಅರ್ಪಿಸುತ್ತಾರೆ. ಇನ್ನು ಮಹಾರಥೋತ್ಸವ ಅನಂತರ ನಡೆಯುವ ಕರ್ಪೂರದ ಆರತಿ ಕಾರ್ಯಕ್ರಮಕ್ಕೂ ವಿಶೇಷತೆ ಇದೆ. ಮಣ್ಣಿನ ಮುಚ್ಚಳಿಕೆಯಲ್ಲಿ ಕರ್ಪೂರದ ಆರತಿ ಹೊತ್ತು ದೇವಸ್ಥಾನ ಸುತ್ತ ಹಾಕಿದರೆ, ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಹರಕೆ ಹೊತ್ತ ಸಾವಿರಾರು ಭಕ್ತರು ಕರ್ಪೂರದ ಆರತಿ ಸೇವೆ ಮಾಡಿ ಪುನೀತರಾಗುತ್ತಾರೆ.
ವರ್ಷಕ್ಕೆ 3 ರಥೋತ್ಸವ, 12 ಸಲ ಬೆಳ್ಳಿ ರಥ: ಚೇಳ್ಳಗುರ್ಕಿ ದೇವಸ್ಥಾನದಲ್ಲಿ ವರ್ಷದದುದ್ದಕ್ಕೂ ಸಾಕಷ್ಟು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಅಮಾವಾಸ್ಯೆಯಂದು ಸಂಜೆ ಬೆಳ್ಳಿ ರಥೋತ್ಸವ ನಡೆದರೆ, ಮೇ ಅಥವಾ ಜೂನ್ನಲ್ಲಿ ಮಹಾರಥೋತ್ಸವ, ಹೂವಿನ ರಥೋತ್ಸವ ನಡೆಯಲಿದೆ. ಇನ್ನು ಕಾರ್ತಿಕ ಮಾಸದಲ್ಲಿ ಮುತ್ತಿನ ರಥೋತ್ಸವ ನಡೆಯುತ್ತದೆ.
ಶರನ್ನವರಾತ್ರಿಯಂದು ಶ್ರೀ ಎರ್ರಿತಾತನವರಿಗೆ 9 ದಿನಗಳ ಕಾಲ ವಿವಿಧ ವಸ್ತುಗಳಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದಲ್ಲದೇ ದೇವಿ ಪುರಾಣ ಹಮ್ಮಿಕೊಳ್ಳುವ ಮೂಲಕ ಆಧುನಿಕ ಕಾಲದಲ್ಲೂ ಪುರಾಣ ಪ್ರವಚನಗಳು ಜೀವಂತ ಇಡುವ ಪ್ರಯತ್ನವನ್ನು, ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಹಾಗೂ ಶ್ರೀ ದಾಸೋಹ ಸೇವಾ ಸಂಘ ಮಾಡುತ್ತಿದೆ. ಸಂಕ್ರಮಣ ಪೂರ್ವ 15 ದಿನಗಳಲ್ಲಿ ಧನುರ್ಮಾಸ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಬೆಳಗಿನ ಜಾವವೇ ಎರ್ರಿತಾತನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಧನುರ್ಮಾಸ ಪೂಜೆ ಮಾಡಿಸಿದ ಭಕ್ತರಿಗೆ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಎರ್ರಿತಾತ ಚರಿತ್ರೆ ನಾಟಕಕ್ಕೆ ರೂಪಾಂತರ: ನಿಸ್ವಾರ್ಥ ಹಾಗೂ ಆಧ್ಯಾತ್ಮಿಕ ಚಿಂತನೆ ಕಡಿಮೆಯಾಗುತ್ತಿರುವ ಆಧುನಿಕ ಕಾಲದಲ್ಲಿ ಈ ಭಾಗದಲ್ಲಿ ಅವಧೂತರು ಬಹಳ ಆಧ್ಯಾತ್ಮಿಕ ನಂಬಿಕೆ ಹುಟ್ಟು ಹಾಕಿರುವುದರಿಂದ ಇದೀಗ ಚೇಳ್ಳಗುರ್ಕಿಯ ಎರ್ರಿತಾತನವರ ಜೀವನ ಚರಿತ್ರೆಗೆ ಅಭಿನಯ ಕಲಾಕೇಂದ್ರ ನಾಟಕ ರೂಪ ನೀಡಿ, ಪ್ರದರ್ಶನಕ್ಕೆ ಮುಂದಾಗಿದೆ. ಎಸ್ಬಿಐನ ಉದ್ಯೋಗಿ ಅಭಿನಯ ಕಲಾ ಕೇಂದ್ರದ ಜಗದೀಶ್ ಅವರು ನಾಟಕ ರಚನೆ ಮಾಡಿ, ನಿರ್ದೇಶನ ಮಾಡಿದ್ದಾರೆ. ಮಹಾರಥೋತ್ಸವ ದಿನದ ರಾತ್ರಿ 11ಕ್ಕೆ ಚೇಳ್ಳಗುರ್ಕಿಯಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ. ಚೇಳ್ಳಗುರ್ಕಿಗೆ ರಾಜ್ಯ ಹಾಗೂ ಆಂಧ್ರದ ಲಕ್ಷಾಂತರ ಭಕ್ತರು ಬಂದು ಭಕ್ತಿ ಸಮರ್ಪಣೆ ಮಾಡಲಿದ್ದಾರೆ.
ರಂಗಭೂಮಿ ಮೇಲೆ...
ಶ್ರೀ ಎರ್ರಿತಾತನವರ ಜೀವನ ಚರಿತ್ರೆ ಕೇವಲ ಪುಸ್ತಕ ರೂಪದಲ್ಲಿದ್ದು, ಇದನ್ನು ರಂಗಭೂಮಿ ಮೇಲೆ ತಂದರೆ ಅವರ ಆಧ್ಯಾತ್ಮಿಕ ಚಿಂತನೆಯನ್ನು ಪ್ರಚಾರ ಮಾಡಿದಂತಾಗುತ್ತದೆ. ಎರ್ರಿತಾತನವರ ಪವಾಡ, ಜೀವನ ವೃತ್ತಾಂತವನ್ನು 'ಚೇಳ್ಳಗುರ್ಕಿ ವಾಸ ಶ್ರೀ ಎರ್ರಿತಾತ' ನಾಟಕ ಒಳಗೊಂಡಿದೆ. ವಾದ್ಯಗಳನ್ನು ಉಪಯೋಗಿಸದೇ ಕಂಪ್ಯೂಟರ್ ಬಳಸಿ ಸಂಗೀತ ಅಳವಡಿಸಲಾಗಿದೆ. ಶಾಸ್ತ್ರೀಯ ಭರತ ನಾಟ್ಯವನ್ನು ನಾಟಕದಲ್ಲಿ ಅಳವಡಿಸಲಾಗಿದೆ. ಶ್ರೀ ಎರ್ರಿತಾತನವರ ಶಿಷ್ಯರಾದ ತಿಕ್ಕಯ್ಯ ರಚಿಸಿದ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಲಾಗಿದೆ.
- ಜಗದೀಶ್, ನಾಟಕ ರಚನಾಕಾರ, ನಿರ್ದೇಶಕ
- ಶಶಿಧರ ಮೇಟಿ