ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹೂವಿನಹಡಗಲಿ: ರು. 60 ಲಕ್ಷ ಪಂಗನಾಮ

Lingaraj Badiger
Updated On : 15 Jun 2013, 11:52 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 14
ಹೂವಿನಹಡಗಲಿಯಲ್ಲಿ ಮೈಸೂರು ಮೂಲದ ಗ್ರೀನ್ ಬಡ್ಸ್ ಆಗ್ರೋ ಫಾರಂ ಲಿ. ಎಂಬ ಕಂಪನಿ ಕೆಲ ಉದ್ದೇಶಗಳನ್ನು ಜನರಿಗೆ ಬಿಂಬಿಸುವ ಮೂಲಕ ಇಲ್ಲಿನ ಸಾವಿರಾರು ಗ್ರಾಹಕರಿಗೆ ವಂಚಿಸಿ ಅಂದಾಜು ರು. 60 ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದೆ.
ಪಟ್ಟಣದ ಹರಪ್ಪನಹಳ್ಳಿ ಮುಖ್ಯರಸ್ತೆ ಬದಿಯ ಪ್ರಕಾಶ ಕಾಂಪ್ಲೆಕ್ಸ್‌ನಲ್ಲಿ 3 ಮಳಿಗೆ ಬಾಡಿಗೆ ಪಡೆದು ಕಂಪನಿ ಕಚೇರಿಯನ್ನು 2010ರಲ್ಲಿ ತೆರೆದಿತ್ತು. ವೈಜ್ಞಾನಿಕ ಕೃಷಿ ಅರಣ್ಯ ಆಧಾರಿತ ಸಂಸ್ಥೆ ಎಂದು ಹೆಸರು ಹೇಳಿಕೊಂಡು ಡೈರಿ ಫಾರಂ, ಹಂದಿ, ಕುರಿ, ಕೋಳಿ ಸಾಕಣೆ. ಅರಣ್ಯ ಬೆಳೆಸುವಿಕೆ, ರೇಷ್ಮೆ ಹಾಗೂ ಔಷಧ ಸಸ್ಯಗಳು ಮತ್ತು ತೋಟಗಾರಿಕೆ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುವುದು, ಜತೆಗೆ ಪರಿಸರ ಸಮತೋಲನ, ಸಾಮಾಜಿಕ ಅರಣ್ಯ ಅಭಿವೃದ್ಧಿ, ಶುಷ್ಕ ಭೂಮಿ ಹಸಿರಾಗಿಸುವುದು, ಉದ್ಯೋಗಾವಕಾಶ ಸೃಷ್ಟಿಸುವುದು, ಅಪಘಾತ ವಿಮೆ ಸೌಲಭ್ಯ ಸೇರಿದಂತೆ ನಾನಾ ಯೋಜನೆಗಳನ್ನು ಗ್ರಾಹಕರ ತಲೆಯಲ್ಲಿ ತುಂಬಿದ್ದಾರೆ. ಇದಲ್ಲದೆ ಆತ್ಮಹತ್ಯೆ, ಸ್ವಾಭಾವಿಕ ಸಾವನ್ನಪ್ಪಿದರೆ ಕಟ್ಟಿದ ಹಣ ಹಾಗೂ 1 ವರ್ಷ ಪೂರ್ಣಗೊಂಡಿದ್ದರೆ ಅಂತಹ ಪಾಲಿಸಿದಾರರ ನಾಮಿನಿಯವರಿಗೆ ಶೇ. 12ರಷ್ಟು ಬಡ್ಡಿ ಸೇರಿಸಿ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿದ ಬಡವರು ಸೇರಿದಂತೆ ಅನೇಕರು ಹಣವನ್ನು ಪಿಗ್ಮಿ ರೂಪದಲ್ಲಿ ಠೇವಣಿ ಮಾಡಿದ್ದರು.
ಬರೋಬ್ಬರಿ ರು. 58 ಲಕ್ಷ: ಸಾವಿರಾರು ಗ್ರಾಹಕರಿಂದ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕ, ಸೇರಿದಂತೆ ಹಣವನ್ನು ಪ್ರತಿದಿನ, ತಿಂಗಳು ಕಂತಿನಂತೆ ಪಿಗ್ಮಿ ರೂಪದಲ್ಲಿ ಕಂಪನಿ ಪಾವತಿಸಿಕೊಂಡಿದೆ. ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು, ಸಣ್ಣಪುಟ್ಟ ವ್ಯಾಪಾರಿಗಳು, ವರ್ತಕರು ಸೇರಿದಂತೆ ಲಕ್ಷಾಂತರ ಬಂಡವಾಳ ತೊಡಗಿಸಿದ್ದಾರೆ. ಈಗ ಅದೆಲ್ಲದಕ್ಕೂ ಪಂಗನಾಮ ಹಾಕಿದ್ದಾರೆ.
ಪಟ್ಟಣದ ಪ್ರಮುಖ ವರ್ತಕ ಭರತೇಶ ಎಂಬುವವರು ರು. 1 ಲಕ್ಷ, ರಾಜ ರು. 1 ಲಕ್ಷ, ಜಿ. ಮಂಜುನಾಥ ರು. 28,800. ಹೀಗೆ ನೂರಾರು ವರ್ತಕರು ಸೇರಿದಂತೆ ಸಾವಿರಾರು ಮಂದಿ ತಮ್ಮ ಲಕ್ಷಾಂತರ ಹಣವನ್ನು ಕಂಪನಿಗೆ ತುಂಬಿ ಗ್ರಾಹಕರಾಗಿದ್ದಾರೆ. ಇದಕ್ಕಾಗಿ ಈ ಕಂಪನಿ ಬಾಂಡ್ ನೀಡಿದೆ. ಒಂದು ಅಂದಾಜಿನ ಪ್ರಕಾರ ಹೂವಿನಹಡಗಲಿ ತಾಲೂಕಿನಲ್ಲೇ ರು. 58 ಲಕ್ಷಕ್ಕೆ ಪಂಗನಾಮ ಹಾಕಿದೆ ಎಂದು ಹೇಳಲಾಗುತ್ತಿದೆ.
ಮೈಸೂರ್‌ಗೆ ಎಸ್ಕೇಪ್: ಈ ಕಂಪನಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಮೂಲಿಮನಿ ಪಟ್ಟಣದ ಹೊರವಲಯದ ಎಂಪಿಪಿ ನಗರದಲ್ಲಿ ವಾಸವಾಗಿದ್ದು, ಇದೀಗ ಗ್ರಾಹಕರಿಂದ ತಪ್ಪಿಸಿಕೊಳ್ಳಲು ವಾರದಿಂದ ಮೈಸೂರಿನಲ್ಲೇ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ. ಗ್ರಾಹಕರ ಹಣವನ್ನು 15 ದಿನಗಳೊಳಗೆ ಹಿಂತಿರುಗಿಸುತ್ತೇವೆ, ಗ್ರಾಹಕರು ಕಾನೂನು, ಪ್ರತಿಭಟನೆ, ದೂರು ದುಮ್ಮಾನ ಕೊಡುವ ಯಾವುದೇ ಕೆಲಸಕ್ಕೆ ಕೈಹಾಕಬಾರದೆಂದು ಕಂಪನಿಯ ಕಚೇರಿ ಗೋಡೆ ಮೇಲೆ ಪತ್ರ ಅಂಟಿಸಲಾಗಿದೆ. ಈ ಪತ್ರ ನೋಡಿದ ಗ್ರಾಹಕರು ಮತ್ತಷ್ಟು ಹೆದರಿ ಕಟ್ಟಿದ ಹಣ ಯಾವಾಗ ಬರುತ್ತೋ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಹಣವನ್ನು ಕಂಪನಿ ಸಾರ್ವಜನಿಕರಿಗೆ ಪಂಗನಾಮ ಹಾಕಿದ್ದರೂ ಯಾವೊಬ್ಬ ಗ್ರಾಹಕ ಕೂಡ ಈವರೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಗೋಜಿಗೆ ಹೋಗಿಲ್ಲ.
ಈಚೆಗೆ ಕೊಟ್ಟೂರಿನಲ್ಲಿಯೂ ಇದೇ ಕಂಪನಿಯ ಗಲಾಟೆ ನಡೆದಿತ್ತು. ಅಲ್ಲದೆ ಮೈಸೂರಿನಲ್ಲಿ ಕಂಪನಿಯ ಮುಖ್ಯ ವ್ಯವಸ್ಥಾಪಕನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement