'ಕನ್ನಡಪ್ರಭ' ಛಾಯಾಗ್ರಾಹಕ ಹಂದ್ಯಾಳಗೆ ರಂಗ ಕೌಸ್ತುಭ ಪ್ರಶಸ್ತಿ
ಬಳ್ಳಾರಿ: 'ಕನ್ನಡಪ್ರಭ' ಪತ್ರಿಕಾ ಛಾಯಾಗ್ರಾಹಕ, ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ ಅವರು 2013ನೇ ಸಾಲಿನ ರಾಜ್ಯಮಟ್ಟದ 'ರಂಗ ಕೌಸ್ತುಭ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಂಗಸಂಗೀತ ಪರಿಷತ್ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಆಗಸ್ಟ್ 4 ಮತ್ತು 5ರಂದು ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಪರಿಷತ್ತಿನ 6ನೇ ರಾಜ್ಯ ಮಟ್ಟದ ರಂಗ ಸಂಗೀತ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಬ್ಲ್ಯೂ.ಎಚ್. ಶಾಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂದ್ಯಾಳ 2 ದಶಕಗಳಿಂದ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದು, ರಕ್ತರಾತ್ರಿಯ ಶಕುನಿ, ಮೋಹಿನಿ ಭಸ್ಮಾಸುರ ನಾಟಕದ ಭಸ್ಮಾಸುರ, ಆಶಾಲತಾ ನಾಟಕದ ಹಾಸ್ಯಪಾತ್ರ ಕಾಶಿ, ಮತ್ತೊಂದು ಕುರುಕ್ಷೇತ್ರದ ಖಳನಾಯಕ ರವಿತೇಜ ಪಾತ್ರ ಸೇರಿದಂತೆ ಹತ್ತು ಹಲವು ಪಾತ್ರಗಳಲ್ಲಿ ಅಭಿನಯಿಸಿ ರಂಗ ಪ್ರಿಯರ ಮನ ಗೆದ್ದಿದ್ದಾರೆ.
ಇವರ ಕಲಾ ಸೇವೆ ಗಮನಿಸಿ ನಾಡಿನ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ, ಬಿರುದು ನೀಡಿ ಗೌರವಿಸಿವೆ. ಜತೆಗೆ ಪತ್ರಿಕಾ ಛಾಯಾಗ್ರಾಹಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.