ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತುಂಗಭದ್ರಾ: ಸದ್ಬಳಕೆ ಬಗ್ಗೆ ಅರ್ಥಪೂರ್ಣ ಚರ್ಚೆ

Vishwanath S
Updated On : 16 Jun 2013, 10:57 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 15
ತುಂಗಭದ್ರಾ ಜಲಾಶಯದಲ್ಲಿನ ನೀರಿನ ಸದ್ಬಳಕೆ ಕುರಿತಾಗಿ ತುಂಗಭದ್ರಾ ಜಲಾಶಯದ ಅಧ್ಯಯನ ಸಮಿತಿ ಬಳ್ಳಾರಿಯ ಪೊಲೀಸ್ ಜಿಮ್‌ಖಾನದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಉತ್ತಮ ಸಲಹೆ, ಸೂಚನೆಯನ್ನು ರೈತ ಮುಖಂಡರು, ಜನಪ್ರತಿನಿಧಿಗಳು, ರಾಜಕಾರಣಿಗಳು ನೀಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿರುವ ಸಂದರ್ಭದಲ್ಲಿ ಜಲಾಶಯದ ನೀರಿನ ಸಂಗ್ರಹಣಾ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಯಾವ ಕಾರ್ಯಯೋಜನೆ ರೂಪಿಸಿದರೆ ಒಳಿತು ಎಂಬ ವಿಷಯಗಳ ಕುರಿತಾಗಿ ವಿಭಿನ್ನವಾದ ಅನಿಸಿಕೆಗಳು, ಅಭಿಪ್ರಾಯಗಳು ವ್ಯಕ್ತವಾಯಿತು.
ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರು ಮಾತನಾಡಿ, ಕಾವೇರಿಯಂತೆ ತುಂಗಭದ್ರಾ ಜಲಾಶಯದ ಸಮಸ್ಯೆ ಭುಗಿಲೇಳದಿರಲಿ ಎಂಬ ಆಶಯ ಎರಡು ರಾಜ್ಯಗಳು ಉದ್ದೇಶವಾಗಿದೆ. ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಉತ್ತಮ ಬಾಂಧವ್ಯ ಇರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ವಿಷಯದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿಲ್ಲ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ರೈತರು, ರಾಜಕಾರಣಿಗಳು, ಎಲ್ಲ ಜನಸಮುದಾಯ ಒಮ್ಮತಕ್ಕೆ ಬಂದು, ನಂತರ ದಿನಗಳಲ್ಲಿ ತಮ್ಮ ನಿರ್ಧಾರಗಳನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ, ಅನಂತರ ಎರಡು ರಾಜ್ಯಗಳ ಜನಪ್ರತಿನಿಧಿಯೊಂದಿಗೆ ಚರ್ಚಿಸಿ, ಸಮಸ್ಯೆಯನ್ನು ಒಗ್ಗಟ್ಟಿನಿಂದ ಬಗೆಹರಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.
ಕೆರೆಗಳಲ್ಲಿ ಸಂಗ್ರಹಿಸಿ: ತುಂಗಭದ್ರಾ ಜಲಾಶಯಕ್ಕೆ ಬರುವ ಹೆಚ್ಚುವರಿ ನೀರಿನ ಸದುಪಯೋಗಪಡಿಸಿಕೊಳ್ಳಬೇಕು. ಆಂಧ್ರಪ್ರದೇಶದಲ್ಲಿ ಜಲಾಶಯದ ನೀರನ್ನು ಕೆರೆಗಳಲ್ಲಿ ಸಂಗ್ರಹಿಸಿ, ನೀರಾವರಿಗೆ ಬಳಸಿದರೆ, ಕರ್ನಾಟಕದಲ್ಲಿ ಇಂಥ ವ್ಯವಸ್ಥೆಗಳಿಲ್ಲ. ನೇರವಾಗಿ ಜಲಾಶಯದ ನೀರನ್ನು ಕಾಲುವೆ ಮೂಲಕ ನೀರಾವರಿಗೆ ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ಜಲಾಶಯದಲ್ಲಿನ ಹೂಳಿನ ಪ್ರಮಾಣ ಹೆಚ್ಚಾಗಿ ರಾಜ್ಯದ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ನೀಗಿಸುವ ಬಗ್ಗೆ ಚರ್ಚಿಸಲಾಯಿತು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಬ್ಯಾಲೆನ್ಸಿಂಗ್ ರಿಜ್‌ವೈಯರ್ ಮಾಡುವುದಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಜಲಾಶಯ ಆಂಧ್ರಪ್ರದೇಶ, ಕರ್ನಾಟಕ ಎರಡು ರಾಜ್ಯಕ್ಕೆ ಸಂಬಂಧಪಟ್ಟಿದ್ದು, ಯಾವುದೇ ನಿರ್ಣಯ ಕೈಗೊಂಡರು. ಈ ಕುರಿತಾಗಿ ಆಂಧ್ರಪ್ರದೇಶದೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಅಸ್ತಿತ್ವವನ್ನು ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳಬೇಕಾದರೆ, ಪರ್ಯಾಯ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದರು. ತುಂಗಭದ್ರಾ ಜಲಾಶಯದ ಅಧ್ಯಯನ ಸಮಿತಿ ಯಾವುದೇ ಪಕ್ಷಕ್ಕೆ, ಸಂಘಟನೆಗೆ ಸೀಮಿತವಾಗಿಲ್ಲ. ಇದು ಪಕ್ಷಾತೀತ ಸಮಿತಿಯಾಗಿದ್ದು, ಇದು ರೈತರ ಉದ್ದೇಶದಿಂದಾಗಿ ಈ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಇದೊಂದು ರೈತ ಸಮಾವೇಶವಾಗಿದೆ, ರೈತರ ಹಿತದೃಷ್ಟಿಯಿಂದ ಈ ವಿಚಾರಸಂಕಿರಣ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಕಾಡು ಕಚೇರಿಯನ್ನು ಬಲಿಷ್ಠಗೊಳಿಸಿ: ಮಾಜಿ ಶಾಸಕ ಚಂದ್ರಯ್ಯಸ್ವಾಮಿ, ಈಗಿರುವ ಹಳ್ಳ, ನದಿಗಳಿಗೆ ಬ್ಯಾರೇಜ್ ನಿರ್ಮಿಸಿ, ನೀರು ಬಳಕೆಗೆ ಮುಂದಾದರೆ ಹೂಳು ತುಂಬುವ ಸಮಸ್ಯೆ ಉದ್ಭವಿಸದು. ಈ ನಿಟ್ಟಿನಲ್ಲಿ ಆಲೋಚಿಸಿದರೆ ಏನಿಲ್ಲವೆಂದರೂ 7ರಿಂದ 8 ಟಿಎಂಸಿ ನೀರನ್ನು ಸಂಗ್ರಹಿಸಿ, ನೀರಾವರಿಗೆ, ಕುಡಿಯುವುದಕ್ಕೆ ಬಳಸಿಕೊಳ್ಳಬಹುದು ಎಂದರು.
  ನಿವೃತ್ತ ಎಂಜಿನಿಯರ್ ಉದ್ದಿಹ್ಯಾಳ್, ನೀರಾವರಿ ಇಲಾಖೆ ಹಾಗೂ ಕಾಡು ಕಚೇರಿಯನ್ನು ಬಲಿಷ್ಠಗೊಳಿಸಬೇಕು. ಇನ್ನು ಪ್ರತಿ ವರ್ಷ ಜಲಾಶಯಕ್ಕೆ ಬರುವ 0.5 ಟಿಎಂಸಿ ಹೂಳು ಸಂಗ್ರಹವಾಗದಂತೆ ಎಚ್ಚರವಹಿಸಬೇಕು. ಮಣ್ಣು ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಅಂದಾಗ ಮಾತ್ರ ಜಲಾಶಯದ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ಸಾಧ್ಯ ಎಂದು ತಿಳಿಸಿದರು.
ತುಂಗಭದ್ರಾ ಜಲಾಶಯದ ಅಧ್ಯಯನ ಸಮಿತಿಯ ಸಂಚಾಲಕ ಎನ್. ಪ್ರತಾಪ ರೆಡ್ಡಿ, ನೀರಾವರಿಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಹೇಳಿರುವುದು ಹಾಗೂ ಕಲಂ 371ನೇ ತಿದ್ದುಪಡಿಯಿಂದಾಗಿ ಹೈದ್ರಾಬಾದ್ ಕರ್ನಾಟಕ್ಕೆ ವಿಶೇಷ ಅನುದಾನ ನೀಡುವುದರಿಂದ, ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೊಡ್ಡ ಹೋರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಮುಖಂಡರಾದ ಕಲ್ಲಕಂಬ ಪಂಪಾತಿ, ರೈತ ಮುಖಂಡರಾದ ಅಶೋಕ್ ಭೂಪಾಲ್, ಮೋಹನ್‌ಕುಮಾರ್, ವಿರೂಪಾಕ್ಷಗೌಡ, ಶಿವಶಂಕರ್ ಮಾತನಾಡಿದರು. ನೀರಾವರಿ ತಜ್ಞರಾದ ರುದ್ರಸ್ವಾಮಿ, ಗೋವಿಂದರಾಜುಲು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement