ವಾಹನ ಕರ ವಸೂಲಿ: ವಿರೋಧ
ಹೂವಿನಹಡಗಲಿ: ಪಟ್ಟಣ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋರಿಕ್ಷಾ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮತ್ತು ಗೂಡ್ಸ್ ವಾಹನಗಳಿಂದ ಪ್ರತಿನಿತ್ಯ ಕರ ವಸೂಲಿ ಮಾಡುವ ಪುರಸಭೆ ತೀರ್ಮಾನ ವಿರೋಧಿಸಿ ಫೆಡರೇಶನ್ ಆಫ್ ಕರ್ನಾಟಕ ಡ್ರೈವರ್ಸ್ ಯೂನಿಯನ್ ಪ್ರತಿಭಟನೆ ನಡೆಸಿತು.
ಆಟೋ, ಟಂಟಂ, ಮ್ಯಾಕ್ಸಿಕ್ಯಾಬ್ ಸೇರಿದಂತೆ ನೂರಾರು ವಾಹನಗಳ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದ ಯೂನಿಯನ್ ಪದಾಧಿಕಾರಿಗಳು ಸಚಿವರು ಮತ್ತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಹಾಗೂ ವಾಹನ ಬಿಡಿ ಭಾಗಗಳ ಬೆಲೆ ಏರಿಕೆಯಿಂದಾಗಿ ವಾಹನ ಚಾಲಕರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ. ಇಂಥ ಸಂದರ್ಭದಲ್ಲಿ ಪಟ್ಟಣದಲ್ಲಿ ಸಂಚರಿಸುವ ಆಟೋ ಇನ್ನಿತರೆ ವಾಹನಗಳ ಮೇಲೆ ದಿನನಿತ್ಯ ಕರ ವಸೂಲಿ ವಿಧಿಸುವಂತೆ ಪುರಸಭೆ ಕೈಗೊಂಡಿರುವ ತೀರ್ಮಾನ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರಿಗೆ ಮನವಿ: ಇದೇ ಸಂದರ್ಭದಲ್ಲಿ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಪದಾಧಿಕಾರಿಗಳು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹೊಸಪೇಟೆಯಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು. ರಾಜ್ಯದ ಎಲ್ಲ ಆಟೋ ಚಾಲಕರಿಗೆ ನಿವೇಶನ ಮತ್ತು ಆಶ್ರಯ ಮನೆಗಳನ್ನು ನೀಡಬೇಕು. ಆಟೋ ಚಾಲನಾ ಪರವಾನಿಗೆ ಪಡೆಯಲು 8ನೇ ತರಗತಿ ಉತ್ತೀಣ ಕಡ್ಡಾಯಗೊಳಿಸಿರುವುದನ್ನು ಕೈಬಿಡಬೇಕು. ವಿ.ವಿ. ಗಿರಿ ಲೇಬರ್ ಇನ್‌ಸ್ಟಿಟ್ಯೂಟ್ ಶಿಫಾರಸುಗಳನ್ನು ಜಾರಿ ಮಾಡಬೇಕು. ಆಟೋ ಮೇಲಿನ ಇನ್ಸೂರೆನ್ಸ್ ದರ ಕಡಿಮೆಗೊಳಿಸಬೇಕೆಂಬ ಪ್ರಮುಖ ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.
ಆಟೋ ಡ್ರೈವರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಕೆ.ಎಂ. ಸಂತೋಷ, ತಾಲೂಕು ಅಧ್ಯಕ್ಷ ಎನ್. ಶಂಷುದ್ದೀನ್, ಕಾರ್ಯದರ್ಶಿ ಎಂ. ಸೈಯ್ಯದ್, ಮ್ಯಾಕ್ಸಿಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ ಸೈಯ್ಯದ್ ಜಮೀರ್, ಗೂಡ್ಸ್ ವಾಹನಗಳ ಸಂಘದ ಅಧ್ಯಕ್ಷ ಎ. ರತ್ನಾಜಿ, ವೈ. ಯಮನೂರಪ್ಪ, ಡೊಳ್ಳಿನ ಹುಲುಗಪ್ಪ, ಹುಸೇನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.