ಗೌಳಿಗರ ಸಮಾಜ ಸಂಘಟನೆಯಾಗಲಿ
ಹೊಸಪೇಟೆ: ಗೌಳಿಗರ ಸಮಾಜ ಸೇರಿದಂತೆ ಹಿಂದುಳಿದ ಸಮಾಜಗಳು ಸಂಘಟಿತರಾಗಿ, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವೈ. ಯಮುನೇಶ್ ಹೇಳಿದರು.
ನಗರದ ವಡಕರಾಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಗೌಳಿಗರ ಸಂಘವು ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಕ್ತಿಮೀರಿ ಪ್ರಯತ್ನ: ಹಿಂದುಳಿದ ವರ್ಗದ ಸಮಾಜದವರೆಲ್ಲ ಸಂಘಟನೆಯಾಗಿ ಸರ್ಕಾರದ ಲಾಭವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಅವರು ಹೇಳಿದರು. ಗೌಳಿ ಸಮಾಜದ ಪೀಠಾಧಿಪತಿ ಮಹದೇವಪ್ಪ ಮಹಾರಾಜ ದೇವಋಷಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗೌಳಿ ಸಮಾಜದ ಸಂಘಟನೆಗೆ ರಾಜ್ಯ ಸಂಘ ಸೇರಿದಂತೆ ಮಠದ ವತಿಯಿಂದ ಪ್ರವಾಸ ಮಾಡುವ ಮೂಲಕ ಸಮಾಜದ ಪ್ರಗತಿಗೆ ಶಕ್ತಿಮೀರಿ ಶ್ರಮಿಸಲಾಗುವುದೆಂದರು. ಗೌಳಿ ಸಮಾಜ ರಾಜ್ಯಾಧ್ಯಕ್ಷ ಗೌಳಿ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಗೌಳಿ ಸಮಾಜದವರು ಸಂಘಟನೆಗೊಳ್ಳಬೇಕು. ಗೌಳಿ ಸಮಾಜದ ರಾಜ್ಯ ಸಂಘ ಜಿಲ್ಲಾವಾರು ಸಭೆ ನಡೆಸುವ ಮೂಲಕ ಆಯಾ ಜಿಲ್ಲಾ ಪದಾಧಿಕಾರಿಗಳು ಎಲ್ಲ ಹಂತಗಳಲ್ಲಿ ಘಟಕಗಳನ್ನು ರಚಿಸಿ ಸಮಾಜದವನ್ನು ಸಂಘಟಿಸುವಂತೆ ಅವರು ಸೂಚಿಸಿದರು. ಗೌಳಿ ಸಮಾಜದ ಮುಖಂಡರಾದ ಗೌಳಿ ವೀರಭಧ್ರಪ್ಪ, ಜಿ. ಶಿವಪ್ಪ, ಗೌಳಿ ಶಿವಶಂಕರ, ಜನಾರ್ಧನ ಚೌದರಿ, ಗೌಳಿ ಕರುಣಾಕರ, ಜೆ. ಶಂಕ್ರಪ್ಪ, ವಿವಿಧ ಜಿಲ್ಲಾ ಘಟಕಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು. ಇತ್ತೀಚೆಗೆ ನಡೆದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಗೌಳಿ ಸಮಾಜದ ಜನಪತ್ರಿನಿಧಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.