ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹೆಚ್ಚಿನ ಬೆಲೆಗೆ ಬೀಜ: ಲೈಸೆನ್ಸ್ ರದ್ದು

Lingaraj Badiger
Updated On : 17 Jun 2013, 11:46 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 16
ಬಿತ್ತನೆಗೆ ಸೂಕ್ತ ಕಾಲವಾದ ಈ ದಿನಗಳನ್ನು ಲಾಭಕ್ಕಾಗಿ ಬಳಸಿಕೊಳ್ಳುವ ದುರುದ್ದೇಶ ಹೊಂದಿ, ಬಿತ್ತನೆ ಬೀಜಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಮುಂದಾಗಿರುವ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ತಾಲೂಕಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಸದಾ ನಿಗಾವಹಿಸಬೇಕು ಎಂದು ಶಾಸಕ ಎಸ್. ಭೀಮಾನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭಾನುವಾರ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕರೆದ ಪಪಂ ನೂತನ ಸದಸ್ಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊಟ್ಟೂರು ಮತ್ತು ಸುತ್ತಮುತ್ತಲಿನ ನೂರಾರು ಸಂಖ್ಯೆಯ ರೈತ ಬಾಂಧವರು ದಿನಂಪ್ರತಿ ತಮಗೆ ಹೆಚ್ಚಿನ ದರದಲ್ಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ನಿಗದಿತ ದರದಲ್ಲಿ ಮಾರಾಟ ಮಾಡಿದ ಬಗ್ಗೆ ಅಧಿಕೃತ ರಸೀದಿ ನೀಡದೆ ಬಿಳಿ ಚೀಟಿಯಲ್ಲಿ ರಸೀದಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಮಾರಾಟ ಮಾಡಿದ ದರವನ್ನೇ ನಮೂದಿಸುವುದಲ್ಲದೇ, ಯಾವುದೇ ಹಂತದಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದರೆ ಸಂಬಂಧಪಟ್ಟ ಮಾರಾಟಗಾರರ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಿ ಎಂದು ಸಭೆಯಲ್ಲಿ ಹಾಜರಿದ್ದ ತಹಸೀಲ್ದಾರ್ ಮತ್ತು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕೀಯ ಮಾಡಬೇಡಿ: ಪಟ್ಟಣದ ವಾರ್ಡ್‌ವೊಂದರಲ್ಲಿ ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿಗಳ ಅಧಿಕಾರಿಣಿ ಸರ್ಕಾರದ ಬಾಂಡ್‌ಗಳನ್ನು ಫಲಾನುಭವಿಗಳಿಗೆ ಜನಪ್ರತಿನಿಧಿಗಳ ಗಮನವಿಲ್ಲದೆ ನೀಡಿರುವುದಕ್ಕೆ ಆಕ್ರೋಶಗೊಂಡ ಭೀಮನಾಯ್ಕ, ಶಿಶು ಅಭಿವೃದ್ಧಿ ಅಧಿಕಾರಿ ಸೋಮಣ್ಣ ಚಿಣ್ಣೂರು ಮತ್ತು ಸಹಾಯಕ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ರಾಜಕೀಯ ಮಾಡುವ ಉದ್ದೇಶದಿಂದ ಬಾಂಡ್‌ಗಳನ್ನು ವಿತರಿಸಿದ್ದೀರಿ, ರಾಜಕೀಯ ಮಾಡುವುದಿದ್ದರೆ ಕೆಲಸ ಬಿಟ್ಟು ರಾಜಕೀಯ ಮಾಡಿ. ಇದೇ ತೆರನಾದ ವರ್ತನೆ ಮತ್ತೆ ಮರುಕಳಿಸಿದರೆ ನಿಮ್ಮ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಜವರೇಗೌಡ, ಸಿಪಿಐ ವಿ.ಎಚ್. ವಿಜಯಕುಮಾರ್, ಪಿಎಸ್‌ಐ ಗುರುರಾಜ್ ಮೈಲಾರ, ಪಂರಾಇ ಎಇಇ ಈರಣ್ಣ, ತಾಪಂ ಪ್ರಭಾರಿ ಇಓ ಹಜರತ್, ಪಿಡ್ಯ್ಬುಡಿ ಅಭಿಯಂತರ ನಾಗನಗೌಡ, ಭೂಸೇನಾ ನಿಗಮದ ರಮೇಶ್, ಮುಖಂಡ ಹರ್ಷವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಪಪಂ ಮುಖ್ಯಾಧಿಕಾರಿ ಹನುಮಂತಮ್ಮ ಸ್ವಾಗತಿಸಿದರು. ಅರುಣ್ ಪಾಟೀಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement