ಬಸ್‌ಪಾಸ್ ವಿತರಿಸಲು ಆಗ್ರಹ
ಬಳ್ಳಾರಿ: ಪಿಯು ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು, ಬಡ ವಿದ್ಯಾರ್ಥಿಗಳು ಅದರಲ್ಲೂ ದೂರದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಣೆ ಮಾಡದಿರುವುದು ತೊಂದರೆಯಾಗಿದೆ. ಕೂಡಲೆ ಬಸ್‌ಪಾಸ್ ವಿತರಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಓ ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಅವಶ್ಯಕವಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಕೂಡಲೆ ಬಸ್‌ಪಾಸ್ ವಿತರಿಸಿ, ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಬಸ್‌ಪಾಸ್ ದರ ನಿಗದಿಪಡಿಸಿ ಪ್ರತಿ ವರ್ಷ ಶಾಲಾ-ಕಾಲೇಜು ಪ್ರಾರಂಭವಾದ ಮೊದಲನೇ ವಾರದಿಂದಲೇ ಬಸ್‌ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಐಡಿಎಸ್‌ಓ ಮನವಿಗೆ ಸ್ಪಂದಿಸಿದ ಸಾರಿಗೆ ಅಧಿಕಾರಿ ಈ ತಿಂಗಳ 20ನೇ ತಾರೀಕಿನಂದು ಬಸ್‌ಪಾಸ್ ವಿತರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಎಐಡಿಎಸ್‌ಓ ಪದಾಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಗೋವಿಂದ, ಸಹಕಾರ್ಯದರ್ಶಿ ಎರ್ರಿಸ್ವಾಮಿ, ರಮೇಶ್, ವಿದ್ಯಾರ್ಥಿ ಮುಖಂಡರಾದ ಅಶೋಕ್, ರಾಜಗೌಡ, ಮಲ್ಲಿಕಾರ್ಜುನ, ಲಿಂಗಮೂರ್ತಿ, ವೀರೇಂದ್ರ ಹಾಗೂ ಇತರರು ಪಾಲ್ಗೊಂಡಿದ್ದರು.