ಭಾಷಣಗಳಿಂದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಸಾಧ್ಯ
ಹಗರಿಬೊಮ್ಮನಹಳ್ಳಿ: ಭಾಷಣ, ವಿಚಾರ ಸಂಕಿರಣಗಳಿಂದಷ್ಟೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಸಾಧ್ಯ. ಶಾಲೆ-ಕಾಲೇಜು, ಸಾರ್ವಜನಿಕ ವಲಯದಲ್ಲಿ ಈ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಿದಾಗ ಸಾಧ್ಯ. ಈ ದಿಸೆಯಲ್ಲಿ ಎಲ್ಲರೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕು ಎಂದು ಹಗರಿಬೊಮ್ಮನಹಳ್ಳಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎ. ಈರಣ್ಣ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಹಳೇಹಗರಿಬೊಮ್ಮನಹಳ್ಳಿಯ ಕೆಪಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹೋಟೆಲ್, ಬಾರ್, ಅಂಗಡಿ, ಕಾರ್ಖಾನೆಗಳಲ್ಲಿ ದುಡಿಯುವರಷ್ಟೆ ಬಾಲಕಾರ್ಮಿಕರಲ್ಲ, ಮನೆ-ಹೊಲಗಳಲ್ಲಿಯೂ ಸಣ್ಣ ಮಕ್ಕಳನ್ನಿಟ್ಟುಕೊಂಡು ಕೆಲಸ ಮಾಡಿದರೂ ಅದು ಬಾಲಕಾರ್ಮಿಕ ಪದ್ಧತಿಯಾಗುತ್ತದೆ ಎಂದರು. ಶಿಕ್ಷೆ ನೀಡುವುದರಿಂದಲೇ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಬದಲಿಗೆ ಕಾನೂನು ಬಗ್ಗೆ ಜಾಗೃತಿ ಮೂಡಿಸಿ ಜನರೇ ಸ್ವಯಂಪ್ರೇರಿತರಾಗಿ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ವಿ. ಶಿವಯೋಗಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಅಭಿಯೋಜಕ ಡಿ. ಮಂಜುನಾಥ, ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ್ ಶೆಟ್ಟರ್, ಹಿರಿಯ ನ್ಯಾಯಾವಾದಿ ಎಸ್.ಎಚ್. ವಿಶಾಲಾಕ್ಷಿ ಬಾಪೂಜಿ, ಮುಖ್ಯೋಪಾಧ್ಯಾಯ ಎಂ.ಮಂಜುನಾಥ, ಉಪನ್ಯಾಸಕ ಚನ್ನಬಸಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಟಿಜಿಎಂ ಕೊಟ್ರೇಶ್ ನಿರೂಪಿಸಿದರು.