ಗುಣಮಟ್ಟದ ಕಾಮಗಾರಿ ಕೈಗೊಳ್ಳಿ
ಹೊಸಪೇಟೆ: ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿರಬೇಕು. ಈಗಾಗಲೇ ಆರಂಭವಾದ, ಮುಂದೆ ನಡೆಯುವ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ವಿಳಂಬವಾಗದೆ ಅವಧಿಯೊಳಗೆ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಶಾಸಕ ಬಿ.ಎಸ್. ಆನಂದ್ ಸಿಂಗ್ ಹೇಳಿದರು.
ಅವರು ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಯಾವುದೇ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರೆ ಅಂತಹ ಕಾಮಗಾರಿಗೆ ನೇರವಾಗಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಕ್ಷೇತ್ರದ ಯಾವುದೇ ಕಾಮಗಾರಿಗಳು ಕಳಪೆಯಾಗಿ ನಡೆಯದಂತೆ ನೋಡಿಕೊಳ್ಳಬೇಕು. ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿಭಾಯಿಸಬೇಕು ಎಂದು ತಾಕೀತು ಮಾಡಿದರು.
ಕ್ಷೇತ್ರದ ಯಾವುದೇ ಜನರಿಗೆ ತೊಂದರೆಯಾಗದಂತೆ ತಮ್ಮ ಕರ್ತವ್ಯ ನಿಭಾಯಿಸಬೇಕು. ಸ್ಥಳೀಯ ಜನರಿಂದ ಅಧಿಕಾರಿಗಳ ಬಗ್ಗೆ ದೂರು ಬರಬಾರದು. ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಯಾ ಇಲಾಖೆ ಮೇಲಧಿಕಾರಿಗಳಿಗೆ ಸೂಚಿಸಲಾಗುವುದು. ದೂರು ಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಡವರಿಗೆ ನೀಡಿ: ಬಡವರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದೆ. ಸೌಲಭ್ಯಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಫಲಾನುಭವಿಗಳಿಗೆ ನೀಡುವಾಗ ಅವರಿಂದ ಹಣ ಕೇಳುವುದಾಗಲಿ ಅಥವಾ ಸರ್ಕಾರ ನೀಡುವ ಸೌಲಭ್ಯದಲ್ಲಿ ಕಡಿತಗೊಳಿಸುವುದಾಗಲಿ ಮಾಡುವಂತಿಲ್ಲ. ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ನಿರ್ಮಿಸಿಕೊಡಬೇಕು. ಸರ್ಕಾರ ಮನೆಗಾಗಿ ನೀಡುವ ಹಣವನ್ನು ಮನೆ ನಿರ್ಮಿಸಲು ಅಧಿಕಾರಿಗಳು ಹೇಳಬೇಕು. ಜನರು ಮನೆಗಳನ್ನು ಕಟ್ಟಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಆನಂದ್ ಸಿಂಗ್ ಬೆಳಗ್ಗೆಯಿಂದ ಒಂದೊಂದೇ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆಸಿಕೊಂಡು ಅಯಾ ಇಲಾಖೆಯ ಪ್ರಗತಿ ವರದಿ ಮತ್ತು ಕಾಮಗಾರಿಗಳ ವಿವರವನ್ನು ಪಡೆದರು. ಗುರುವಾರವೂ ಸಭೆ ನಡೆಯಲಿದೆ. ಸಭೆಯಲ್ಲಿ ನಗರಸಭಾ ಪೌರಾಯುಕ್ತ ಕೆ. ರಂಗಸ್ವಾಮಿ, ತಾಪಂ ಇಓ ಬಾಲಸ್ವಾಮಿ ದೇಶಪ್ಪ, ಜಿಪಂ ಎಇ ವೆಂಕಟರಾಜು, ಬಿಇಓ ಪಿ. ಸುನಂದಾ, ವಿವಿಧ ಗ್ರಾಪಂ ಕಾರ್ಯದರ್ಶಿಗಳು, ಪಿಡಿಓಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.