ಟಿಬಿ ಬೋರ್ಡ್ ನೌಕರರ ಧರಣಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 20
ಪೂರ್ಣ ಪ್ರಮಾಣದ ಸೇವಾ ಪದ್ಧತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತುಂಗಭದ್ರಾ ಮಂಡಳಿ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಇಲ್ಲಿನ ಟಿಬಿ ಬೋರ್ಡ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನೌಕರರ ಸಂಘದ ಚೇರ್‌ಮನ್, ಮಾಜಿ ಸಚಿವ ಎಂ. ದಿವಾಕರ ಬಾಬು, ತುಂಗಭದ್ರಾ ಮಂಡಳಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು ತಕ್ಷಣ ಮುಂದಾಗಬೇಕು. ಬೇಡಿಕೆಗಳು ಈಡೇರದೆ ಹೋದಲ್ಲಿ ಧರಣಿ ಮುಂದುವರಿಯಲಿದೆ ಎಂದರು.
ಬೇಡಿಕೆ ಈಡೇರಿಸಿ: ಈಗ ಜಾರಿಯಲ್ಲಿರುವ ಪೆನ್ಷನ್, ಗ್ರಾಚ್ಯುಟಿ, ಇತರೆ ಸೌಲಭ್ಯಗಳ ವಿತರಣಾ ವೇಳೆಯಲ್ಲಿ ಕಡಿತಗೊಳ್ಳುತ್ತಿರುವ ಪದ್ಧತಿ ರದ್ದುಪಡಿಸಬೇಕು. ಪೂರ್ಣ ಪ್ರಮಾಣದ ಸೇವಾ ಪದ್ಧತಿ ಅನುಷ್ಠಾನಕ್ಕೆ ತರಬೇಕು. ಮಂಡಳಿ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಬೇಕು. ಅಗತ್ಯ ಸಿಬ್ಬಂದಿ ನೇಮಿಸಬೇಕು. ನೌಕರರ ವಸತಿಗೃಹಗಳನ್ನು ದುರಸ್ತಿಗೊಳಿಸಬೇಕು. ನೌಕರರ ಕಾಲೋನಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಮಂಡಳಿಯ ಅಧೀನದ ಖಾಲಿ ನಿವೇಶನಗಳನ್ನು ಹೊರಗಿನವರು ಅತಿಕ್ರಮ ಮಾಡುತ್ತಿದ್ದು, ಇದನ್ನು ತಡೆಯಲು ಖಾಲಿ ನಿವೇಶನಗಳನ್ನು ಮಂಡಳಿ ನೌಕರರ ಗೃಹ ನಿರ್ಮಾಣ ಸಂಘಕ್ಕೆ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಸಂಘದ ಅಧ್ಯಕ್ಷ ಎಂ. ಹನುಮಣ್ಣ, ಕಾರ್ಯದರ್ಶಿ ಟಿ.ಕೆ. ಗೋಪಾಲಕೃಷ್ಣ, ಕೆ. ಶ್ರೀನಿವಾಸಲು, ವೀರೇಶ್, ಜೆ. ಪ್ರವೀಣ್, ವರ್ಮಾ, ನಗರಸಭಾ ಸದಸ್ಯೆ ಧನಲಕ್ಷ್ಮಿ, ಗೋವಿಂದರಾಜು ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.