ಬೋನಿಗೆ ಬಿದ್ದ ಹೆಣ್ಣು ಚಿರತೆ
ಹೊಸಪೇಟೆ: ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದ ಹೊಲವೊಂದರಲ್ಲಿ ಇಡಲಾಗಿದ್ದ ಬೋನಿಗೆ ಚಿರತೆಯೊಂದು ಗುರುವಾರ ಸಿಕ್ಕಿ ಬಿದ್ದಿದೆ.
ಕೆಲವು ತಿಂಗಳಿಂದ ಹಂಪಿ, ಕಮಲಾಪುರ ಹಾಗೂ ಕಡ್ಡಿರಾಂಪುರ ಪ್ರದೇಶದಲ್ಲಿ ಚಿರತೆ ಹಾವಳಿ ಅಧಿಕವಾಗಿತ್ತು. ರಾತ್ರಿ ವೇಳೆ ಹಂಪಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳೊಳಗೆ ಪ್ರವೇಶಿಸಿ ಸುಮಾರು 8-10 ಕುರಿಗಳು, 4-5 ಹಸುಗಳು, ಆಡು, ನಾಯಿ ಸೇರಿದಂತೆ ಕೆಲವು ಪ್ರಾಣಿಗಳನ್ನು ತಿಂದು ಹಾಕಿತ್ತು. ಈ ಕುರಿತು ಅರಣ್ಯ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ದೂರು ನೀಡಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಾವಳಿ ಗಮನಿಸಿ ಕಡ್ಡಿರಾಂಪುರ ಗ್ರಾಮದ ಕೋರಗುಡ್ಡದ ಹತ್ತಿರವಿರುವ ಗೊಂಚೆ ನಾಗಪ್ಪ ಎಂಬುವವರಿಗೆ ಸೇರಿದ ಹೊಲದಲ್ಲಿ ಗ್ರಾಮಸ್ಥರೊಂದಿಗೆ ಚಿರತೆ ಬೋನನ್ನು ಬುಧವಾರ ಸಂಜೆ ಇರಿಸಿದ್ದರು. ಗುರುವಾರ ಬೆಳಗಿನ ಜಾವ ಬೋನಿನಲ್ಲಿ 3 ವರ್ಷದ ಹೆಣ್ಣು ಚಿರತೆ ಸಿಕ್ಕಿ ಬಿದ್ದಿದೆ.